ನ್ಯೂಸ್

೭ ಮಂದಿ ದ್ವಿಚಕ್ರ ವಾಹನ ಕಳ್ಳರ ಬಂಧನ :22 ದ್ವಿಚಕ್ರ ವಾಹನ ಜಪ್ತಿ

ಮಂಜುನಾಥ.ಕೆ

ಬೆಂಗಳೂರು: ನಗರದ ಎರಡು ಪ್ರತ್ಯೇಕ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಮೂವರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ ೭ ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ವ್ಹೀಲಿಂಗ್ ಮಾಡಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಂಡ್ಲು ನಿವಾಸಿ ಯುವರಾಜ(೨೦) ಬಂಧಿತ. ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ೯ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೧೧ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಸುಂದರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಪ್ರಭು ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಅಪರಾಧ ಹಿನ್ನೆಲೆವುಳ್ಳವನಾಗಿದ್ದು, ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದ. ಸರ್ವಿಸ್ ಸ್ಟೇಷನ್‌ವೊಂದರಲ್ಲಿ ವಾಹನಗಳ ವಾಷಿಂಗ್ ಕೆಲಸ ಮಾಡುತ್ತಿದ್ದ. ವ್ಹೀಲಿಂಗ್ ಶೋಕಿಗೆ ಬಿದ್ದಿದ್ದ ಈತ ನಗರದ ವಿವಿಧೆಡೆ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ರಾತ್ರಿ ವೇಳೆ ಸ್ನೇಹಿತರ ಜತೆಗೆ ಖಾಲಿ ರಸ್ತೆಗಳಿಗೆ ತೆರಳಿ ವ್ಹೀಲಿಂಗ್ ಮಾಡುತ್ತಿದ್ದ. ವ್ಹೀಲಿಂಗ್ ಮಾಡುವುದನ್ನು ವಿಡಿಯೊ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ.

ವಾಹನ ನಿರ್ಜನ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ:
ಆರೋಪಿ ಯುವರಾಜ ವ್ಹೀಲಿಂಗ್ ಮಾಡಲು ಕಳವು ಮಾಡುತ್ತಿದ್ದ. ವ್ಹೀಲಿಂಗ್ ಮಾಡಿದ ಬಳಿಕ ಮಾರಾಟ ಮಾಡುತ್ತಿರಲಿಲ್ಲ. ಬದಲಾಗಿ ನಿರ್ಜನಪ್ರದೇಶ ಅಥವಾ ಗಲ್ಲಿಗಳಲ್ಲಿ ನಿಲುಗಡೆ ಮಾಡುತ್ತಿದ್ದ. ಸ್ನೇಹಿತರಿಗೂ ಉಚಿತವಾಗಿ ನೀಡುತ್ತಿದ್ದ. ಈತನ ಸ್ನೇಹಿತರಾಗಿರುವ ಮೂವರು ಅಪ್ರಾಪ್ತರು ಸಹ ವ್ಹೀಲಿಂಗ್ ಶೋಕಿ ಮೈಗೂಡಿಸಿಕೊಂಡಿದ್ದರು. ಆರೋಪಿ ಜತೆಗೆ ಸೇರಿಕೊಂಡು ದ್ವಿಚಕ್ರ ವಾಹನಗಳನ್ನು ಕದ್ದು ವ್ಹೀಲಿಂಗ್ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಟ್ರೈನ್‌ನಲ್ಲಿ ಹೋಗಿ ವಾಹನ ಕಳವು:
ಆರೋಪಿ ಹಾಗೂ ಅಪ್ರಾಪ್ತರು ಬೆಂಗಳೂರಿನಿಂದ ತುಮಕೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿ ಪಾರ್ಕಿಂಗ್ ಸ್ಥಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿಕೊಂಡು ನಗರಕ್ಕೆ ಬರುತ್ತಿದ್ದರು. ಬಳಿಕ ಆರೋಪಿ ಯುವರಾಜ ಹಾಗೂ ಅಪ್ರಾಪ್ತರು ಒಟ್ಟಿಗೆ ವ್ಹೀಲಿಂಗ್ ಮಾಡಿ ಖುಷಿ ಪಡುತ್ತಿದ್ದರು. ಬಳಿಕ ದ್ವಿಚಕ್ರ ವಾಹನಗಳನ್ನು ನಿರ್ಜನಪ್ರದೇಶಗಳಲ್ಲಿ ನಿಲುಗಡೆ ಮಾಡುತ್ತಿದ್ದರು. ಈ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ಯುವರಾಜನ ಬಂಧನದಿಂದ ವಿದ್ಯಾರಣ್ಯಪುರ ೭, ರಾಮಮೂರ್ತಿನಗರ, ತುಮಕೂರು ಜಿಲ್ಲೆಯ ತಿಲಕ್ ಪಾರ್ಕ್, ತಿಲಕ್ ಪಾರ್ಕ್ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿ ಒಟ್ಟು ೧೧ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರ ಬಂಧನ:
ಮತ್ತೊಂದು ಪ್ರಕರಣದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಸೈಯದ್ ಅಲಿ ಅಲಿಯಾಸ್ ಕಾಲು(೨೮), ಕೆ.ಜಿ.ಹಳ್ಳಿ ನಿವಾಸಿ ಮುಬಾರಕ್ ಖಾನ್ ಅಲಿಯಾಸ್ ಮುಬ್ಬು(೨೪) ಮತ್ತು ಆನೇಕಲ್ ತಾಲೂಕಿನ ನಿರಂಜನ್(೪೦) ಆರೋಪಿಗಳಿಂದ ೧೬.೩೦ ಲಕ್ಷ ರೂ. ಮೌಲ್ಯದ ೭೨.೨ ಗ್ರಾಂ ಚಿನ್ನಾಭರಣ, ೧೧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ನಗರದ ಆರ್.ಟಿ.ನಗರ, ಜೆ.ಸಿ.ನಗರ, ಉಪ್ಪಾರಪೇಟೆ, ಕೆ.ಜಿ.ಹಳ್ಳಿ, ಪುಲಕೇಶಿನಗರ, ಬಾಗಲೂರು,. ಬಾಣಸವಾಡಿ, ಜೀವನ್ ಭೀಮಾನಗರ, ಹಲಸೂರು, ಹೈಗ್ರೌಂಡ್ಸ್ ಠಾಣೆಗಳಲ್ಲಿ ದಾಖಲಾಗಿದ್ದ ೧೧ ದ್ವಿಚಕ್ರ ವಾಹನ ಕಳವು ಮತ್ತು ಕೊಡಿಗೇಹಳ್ಳಿ ಠಾಣೆಯ ೧ ಸರ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ಇತ್ತೀಚೆಗೆ ನವೀದ್ ಅಹಮ್ಮದ್ ಎಂಬವರ ಬೈಕ್ ಕಳವು ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಈ ಪೈಕಿ ಸೈಯದ್ ಅಲಿ ವಿರುದ್ಧ ೧೨ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ಕಳವು, ದರೋಡೆ ಪ್ರಕರಣಗಳು ದಾಖಲಾಗಿವೆ. ಮುಬಾರಕ್ ಖಾನ್ ವಿರುದ್ಧ ನಾಲ್ಕು ಠಾಣೆಯಲ್ಲಿ ಕಳುವು, ರಾಬರಿ ಪ್ರಕರಣಗಳು ದಾಖಲಾಗಿವೆ. ಮೂರನೇ ಆರೋಪಿ ನಿರಂಜನ್ ವಿರುದ್ಧ ಯಲಹಂಕ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

ಆ.೧೩ರಂದು ಸಂಜೆ ಆರು ಗಂಟೆ ಸುಮಾರಿಗೆ ಸೈಯದ್ ಮತ್ತು ಮುಬಾರಕ್ ಸುಲ್ತಾನ್ ಪಾಳ್ಯ ಮುಖ್ಯ ರಸ್ತೆಯ ಪಾನಿಪುರಿ ಮೈದಾನದ ಮುಂಭಾಗದಿಂದ ಕಳವು ಮಾಡಿದ್ದ ಬೈಕ್‌ನಲ್ಲಿ ಬರುತ್ತಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಿಂದ ೧೨.೩೦ ಲಕ್ಷ ರೂ. ಮೌಲ್ಯದ ೧೧ ಬೈಕ್‌ಗಳ ವಶಕ್ಕೆ ಪಡೆಯಲಾಗಿದೆ.

ಇವರು ನೀಡಿದ ಮಾಹಿತಿ ಮೇರೆಗೆ ಕದ್ದ ಬೈಕ್‌ಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುತ್ತಿದ್ದ ನಿರಂಜನ್‌ನನ್ನು ಬಂಧಿಸಲಾಗಿದೆ. ಈತನಿಂದ ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ರಾಬರಿ ಪ್ರಕರಣದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬೈಕ್‌ಗಳನ್ನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.