ಬೆಂಗಳೂರು: ಶಾದಿ ಡಾಟ್ ಕಾಂನಲ್ಲಿ ಯುವತಿಗೆ ಪರಿಚಯನಾದ ವ್ಯಕ್ತಿ, ಇಂಗ್ಲೆಂಡ್‌ನಲ್ಲಿ ಇರುವುದಾಗಿ ನಂಬಿಸಿ ಮದುವೆ ಆಗುವುದಾಗಿ ಹೇಳಿ 7 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ.
ಚನ್ನಸಂದ್ರ ನಿವಾಸಿ 32 ವರ್ಷದ ಯುವತಿ, ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಅಶೀಶ್ ಕುಮಾರ್ ಎಂಬಾತನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾದಿ ಡಾಟ್ ಕಾಮ್‌ನಲ್ಲಿ ಮೇ 24ರಂದು ಯುವತಿಗೆ ಆಶೀಶ್ ಪರಿಚಯವಾಗಿದ್ದು, ತಾನು ಇಂಗ್ಲೆಂಡ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದ. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಸಂಭಾಷಣೆ ನಡೆಸಿದ್ದರು. ಸ್ನೇಹ ಗಾಢವಾಗುತ್ತಲೇ ‘ಬೆಂಗಳೂರಿಗೆ ಬಂದು ಮದುವೆ ಆಗುವೆ’ ಎಂದು ಯುವತಿಗೆ ಭರವಸೆ ಕೊಟ್ಟಿದ್ದ. ಇಂಡಿಯಾಗೆ ಬರುತ್ತಿರುವುದಾಗಿ ಹೇಳಿದ ಅಶೀಶ್, ಜೂ. 21ರಂದು ಕರೆ ಮಾಡಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ.
ನನ್ನ ಬಳಿ 1.28 ಲಕ್ಷ ಪೌಂಡ್ ವಿದೇಶಿ ಕರೆನ್ಸಿ ಇದೆ. ಇದನ್ನು ಭಾರತೀಯ ಕರೆನ್ಸಿ 1.36 ಕೋಟಿ ರೂ.ಗೆ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ, ಏರ್‌ಪೋರ್ಟ್‌ನಲ್ಲಿ ಕ್ಲಿಯರನ್ಸ್ ಸಿಗುವುದಿಲ್ಲ. ಆದರೆ, ನನ್ನ ಬಳಿ ಕರೆನ್ಸಿ ಇಲ್ಲ. ತಕ್ಷಣ 7 ಲಕ್ಷ ರೂ. ಆನ್‌ಲೈನ್ ವರ್ಗಾವಣೆ ಮಾಡಿ. ಇಲ್ಲಿಂದ ಬಂದ ಮೇಲೆ ವಾಪಸ್ ಕೊಡುವುದಾಗಿ ಕೇಳಿಕೊಂಡಿದ್ದ. ಈತನ ಮಾತು ನಂಬಿದ ಯುವತಿ, ಆರೋಪಿ ಕೊಟ್ಟ ಬ್ಯಾಂಕ್ ಖಾತೆಗೆ 7 ಲಕ್ಷ ರೂ. ಜಮೆ ಮಾಡಿದ್ದರು. ಹಣ ಕೈಸೇರಿದ ಮೇಲೆ ಅಶೀಶ್, ಮೊಬೈಲ್ ಆ್ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.