ನ್ಯೂಸ್

ರಷ್ಯಾದಲ್ಲಿ 2 ಸೇತುವೆ ಸ್ಫೋಟ 7 ಬಲಿ

ಮಾಸ್ಕೋ: ರಷ್ಯಾದಲ್ಲಿ ಶನಿವಾರ ರಾತ್ರಿ ಎರಡು ಸೇತುವೆಗಳು ಸ್ಪೋಟಗೊಂಡು ರೈಲುಗಳು ಹಳಿ ತಪ್ಪಿ ಏಳು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಈ ಎರಡೂ ಪ್ರದೇಶಗಳು ರಷ್ಯಾದ ದಕ್ಷಿಣ ಭಾಗದಲ್ಲಿದ್ದು ಆಗಾಗ ಯೂಕ್ರೇನ್ ದಾಳಿಗೆ ಒಳಗಾಗುತ್ತವೆ. ಆದರೆ, 3 ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಯುದ್ಧಕ್ಕೂ ಈ ಘಟನೆಗಳಿಗೂ ಸಂಬಂಧವಿದೆಯೇ ಎನ್ನುವುದು ತಕ್ಷಣಕ್ಕೆ ದೃಢಪಟ್ಟಿಲ್ಲ.

ಯೂಕ್ರೇನ್ ಗಡಿಯಲ್ಲಿರುವ ಬ್ರಿಯಾನ್​ಸ್ ವಲಯದಲ್ಲಿ ಸೇತುವೆಯೊಂದು ಪ್ರಯಾಣಿಕ ರೈಲಿನ ಮೇಲೆ ಬಿದ್ದು ಸಾವು-ನೋವು ಉಂಟಾಯಿತು. ಅದಾದ ಕೆಲವೇ ಗಂಟೆಗಳಲ್ಲಿ, ಕುರ್ಸ್ಕ್ ಪ್ರದೇಶದಲ್ಲಿ ಸೇತುವೆ ಕುಸಿದು ಬಿದ್ದು ರೈಲೊಂದು ಹಳಿ ತಪ್ಪಿ ಅನಾಹುತ ಸಂಭವಿಸಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕುರ್ಸ್ಕ್ ಕೂಡ ಯೂಕ್ರೇನ್ ಗಡಿಯಲ್ಲಿದೆ.

ಎರಡನೇ ಪ್ರಕರಣದಲ್ಲಿ ಸೇತುವೆ ಮೇಲೆ ಸಾಗುತ್ತಿದ್ದ ಸರಕು ಸಾಗಣೆ ರೈಲು, ಸ್ಪೋಟದಿಂದಾಗಿ ಸೇತುವೆ ಕುಸಿದಿದ್ದರಿಂದ ಕೆಳಗಡೆ ರಸ್ತೆ ಮೇಲೆ ಉರುಳಿತು ಎಂದು ಸ್ಥಳೀಯ ಹಂಗಾಮಿ ಗವರ್ನರ್ ಅಲೆಕ್ಸಾಂಡರ್ ಖಿನ್​ಶ್ಟೀನ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ಘರ್ಷಣೆಯಿಂದಾಗಿ ಬೆಂಕಿ ಹೊತ್ತಿಕೊಂಡರೂ ಸಾವು-ನೋವು ಸಂಭವಿಸಲಿಲ್ಲ. ಸ್ಪೋಟದಿಂದಾಗಿ ಎರಡು ಸೇತುವೆಗಳು ಕುಸಿದಿವೆ ಎಂದು ರಷ್ಯಾದ ಉನ್ನತ ಕ್ರಿಮಿನಲ್ ತನಿಖಾ ಸಂಸ್ಥೆ ಹೇಳಿದೆ.

ರಷ್ಯಾದಲ್ಲಿ ಹಳಿತಪ್ಪಿ ಅಪಘಾತಕ್ಕೀಡಾದ ರೈಲು

ರಷ್ಯಾ ವಾಯುಪಡೆ ವಿರುದ್ಧ ಯೂಕ್ರೆನ್ ದೊಡ್ಡಮಟ್ಟದ ದಾಳಿ ನಡೆಸಿದೆ. ಹಲವು ವಾಯುನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ 40 ಸೇನಾ ವಿಮಾನಗಳನ್ನು ಧ್ವಂಸಗೊಳಿಸಿರುವುದಾಗಿ ಯೂಕ್ರೇನ್​ನ ಸೇನಾಧಿಕಾರಿಗಳು ತಿಳಿಸಿದ್ದಾರೆ. ಯೂಕ್ರೇನ್ ಸೇನೆ ತನ್ನ ಗಡಿಯಿಂದ 4300 ಕಿ.ಮೀ. ದೂರದಲ್ಲಿರುವ ಇರ್ಕಟ್ಸ್್ಕ ಒಬ್ಲಾಸ್ಟ್​ನಲ್ಲಿನ ಬೆಲಾಯಾ ವಾಯುನೆಲೆ ಮತ್ತು 2000 ಕಿ.ಮೀ. ದೂರದಲ್ಲಿರುವ ಮುರ್ಮನ್ಸ್್ಕ ಒಬ್ಲಾಸ್ಟ್​ನಲ್ಲಿರುವ ಒಲೆನ್ಯಾ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದೆ. ಸೇನಾ ವಿಮಾನಗಳಿಗೆ ಹಾನಿಯಾಗಿದ್ದು, ವಿಮಾನಗಳು ಬೆಂಕಿಗಾಹುತಿಯಾಗಿವೆ. ಡ್ರೋನ್​ಗಳನ್ನು ಹಾರಿಸುತ್ತಿದ್ದ ಟ್ರಕ್​ಗಳನ್ನು ಪತ್ತೆ ಹಚ್ಚಿ ಉಡಾಯಿಸಲಾಗಿದೆ ಎಂದು ವರದಿಯಾಗಿದೆ.