ಶ್ರೀನಗರ: ಜಮ್ಮು-ಕಾಶ್ಮೀರದ ತ್ರಾಲ್ ಮತ್ತು ಶೋಪಿಯಾನ್ನಲ್ಲಿ ಭದ್ರತಾ ಪಡೆಗಳು ಏಳು ಉಗ್ರರನ್ನು ಎರಡು ಪ್ರತ್ಯೇಕ ಎನ್ಕೌಂಟರ್ನಲ್ಲಿ ಹೊಡೆದುರುಳಿಸಿವೆ
ತ್ರಾಲ್ನಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರ ತಂಡ ಜಂಟಿಯಾಗಿ ಶೋಧಕಾರ್ಯವನ್ನು ಶುರುಮಾಡಿತ್ತು. ಉಗ್ರರ ಅಡಗುದಾಣದ ಪ್ರದೇಶದಲ್ಲಿರುವ ಸಾರ್ವಜನಿಕರನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಬಳಿಕ ಶರಣಾಗುವಂತೆ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿತು.
ಆದರೆ ಇದಕ್ಕೆ ಬಗ್ಗದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ಶುರುಮಾಡಿದರು. ಸೇನೆ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಇನ್ನೊಂದೆಡೆ ಶೋಪಿಯಾನ್ನಲ್ಲಿ, ಮಸೀದಿಯಲ್ಲಿ ಉಗ್ರರು ಆಶ್ರಯ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಗುರುವಾರ ಸಂಜೆ ಕಾರ್ಯಾಚರಣೆ ಶುರುವಾಗಿತ್ತು. ಎನ್ಕೌಂಟರ್ನಲ್ಲಿ ಕನಿಷ್ಠ ಐವರು ಉಗ್ರರು ಹತರಾಗಿದ್ದಾರೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಮಸೀದಿ ಒಳಗಿರುವ ಉಗ್ರರ ಸಂಖ್ಯೆ ನಿಖರವಾಗಿ ಬಹಿರಂಗವಾಗಿಲ್ಲ. ಉಗ್ರರ ಮನವೊಲಿಸುವುದಕ್ಕೆ ಸ್ಥಳೀಯ ಇಮಾಮ್ ಒಬ್ಬರನ್ನು ಭದ್ರತಾ ಪಡೆ ಮಧ್ಯಸ್ಥಿಕೆದಾರನನ್ನಾಗಿ ಮಸೀದಿಯೊಳಕ್ಕೆ ಕಳುಹಿಸಿದೆ. ಅನ್ಸಾರ್ ಘಝ್ವಾತುಲ್ ಹಿಂದ್ ಉಗ್ರ ಸಂಘಟನೆಯ ಕಮಾಂಡರ್ ಮಸೀದಿಯೊಳಗೆ ಅವಿತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.