ನ್ಯೂಸ್

ಉತ್ತರ ಭಾರತೀಯರ ಜೀವಿತಾವಧಿ 7.6 ವರ್ಷ ಇಳಿಕೆ!; ಪರಿಸರ ಮಾಲಿನ್ಯದ ಪರಿಣಾಮ

Webdesk - Ravikanth

ನವದೆಹಲಿ: ಉತ್ತರ ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಅಲ್ಲಿ ವಾಸಿಸುತ್ತಿರುವ ಜನರ ಜೀವಿತಾವಧಿಯಲ್ಲಿ 7.6 ವರ್ಷಗಳಷ್ಟು ಕಡಿಮೆಯಾಗಲಿದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. 2013ರಿಂದ ಜಗತ್ತಿನ ಮಾಲಿನ್ಯದ ಶೇ. 44 ಹೆಚ್ಚಳ ಭಾರತದಿಂದಲೇ ಬಂದಿದೆ. 1998ರಿಂದೀಚೆಗೆ ಭಾರತದ ಸರಾಸರಿ ಕಣಗಳ ಮಾಲಿನ್ಯವು ಶೇ.61.4ರಷ್ಟು ಹೆಚ್ಚಳವಾಗಿದೆ ಎಂದು ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್​ಸ್ಟಿಟ್ಯೂಟ್​ನ (ಇಪಿಐಸಿ ) ವಾಯು ಗುಣಮಟ್ಟ ಜೀವನ ಸೂಚ್ಯಂಕವು ತಿಳಿಸಿದೆ.

ಎರಡನೇ ಕಲುಷಿತ ದೇಶ: ಸೂಚ್ಯಂಕದ ಹೊಸ ವಿಶ್ಲೇಷಣೆ ಪ್ರಕಾರ, ಉತ್ತರ ಭಾರತದ ಇಂಡೋ-ಗಂಗಾ ಬಯಲು ಪ್ರದೇಶದಲ್ಲಿ 510 ದಶಲಕ್ಷ ಜನರು ವಾಸಿಸುತ್ತಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಶೇ. 40 ರಷ್ಟು ಭಾಗ. ಪ್ರಸ್ತುತ ಮಾಲಿನ್ಯದ ಮಟ್ಟ ಹೀಗೆಯೇ ಮುಂದುವರಿದರೆ ಅವರ ಆಯಸ್ಸು 7.6 ವರ್ಷಗಳಷ್ಟು ಕಡಿಮೆಯಾಗಲಿದೆ. ಭಾರತವು ಬಾಂಗ್ಲಾದೇಶ ನಂತರ ಜಗತ್ತಿನ ಎರಡನೇ ಕಲುಷಿತ ದೇಶವಾಗಿದೆ. ಜಗತ್ತಿ ಅತ್ಯಂತ ಮಾಲಿನ್ಯಕಾರಿ ನಗರವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೆಹಲಿಯಲ್ಲಿ ವಾಯು ಮಾಲಿನ್ಯವು ಜನರ ಜೀವಿತಾವಧಿಯನ್ನು ಸುಮಾರು 10 ವರ್ಷಗಳಷ್ಟು ಕಡಿಮೆ ಮಾಡಲಿದೆ ಎಂದು ಅಧ್ಯಯನ ಹೇಳಿದೆ. ದೆಹಲಿಯಲ್ಲಿ ವಾರ್ಷಿಕ ಸರಾಸರಿ ಮಾಲಿನ್ಯ ಕಣಗಳು ಒಂದು ಕ್ಯೂಬಿಕ್ ಮೀಟರ್​ಗೆ ಐದು ಮೈಕ್ರೊಗ್ರಾಮ್ಂತ ಹೆಚ್ಚಾಗದಿದ್ದರೆ ಮಾತ್ರ ಅಲ್ಲಿಯ ಜನರ ಆಯಸ್ಸು ಹೆಚ್ಚಾಗಲಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಗಿಂತ ವಾರ್ಷಿಕ ಸರಾಸರಿ ಮಾಲಿನ್ಯ ಕಣಗಳ ಮಟ್ಟ ಹೆಚ್ಚಿರುವ ಪ್ರದೇಶಗಳಲ್ಲಿ ಭಾರತದ 1.3 ಶತಕೋಟಿ ಜನರು ವಾಸಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ತಾಯಿ ಮತ್ತು ಮಗುವಿನ ಅಪೌಷ್ಟಿಕತೆಯಿಂದ ಸರಾಸರಿ ಜೀವಿತಾವಧಿ ಸುಮಾರು 1.8 ವರ್ಷಗಳಷ್ಟು ಕಡಿಮೆಯಾಗಲಿದೆ. ಧೂಮಪಾನದಿಂದ ಜೀವಿತಾವಧಿಯು ಸರಾಸರಿಗಿಂತ 1.5 ವರ್ಷಗಳಷ್ಟು ಕಡಿಮೆಯಾಗಲಿದೆ ಎಂದು ಅಧ್ಯಯನ ತಿಳಿಸಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಹೆಚ್ಚು: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳವು ಜಗತ್ತಿನ ಅತಿ ಕಲುಷಿತ ದೇಶಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿವೆ. ಈ ಎಲ್ಲ ದೇಶಗಳಲ್ಲಿ ಆರೋಗ್ಯ ಸಮಸ್ಯೆಗಳಿಗಿಂತ ವಾಯು ಮಾಲಿನ್ಯವು ಹೆಚ್ಚು ಅಪಾಯಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ.

ಅಪಾಯಕಾರಿ: ವಾಯು ಮಾಲಿನ್ಯದಿಂದಾಗಿ ಜಾಗತಿಕ ಸರಾಸರಿ ಜೀವಿತಾವಧಿಯಲ್ಲಿ 2.2 ವರ್ಷ ಕಡಿಮೆಯಾಗುತ್ತಿದೆ. ವಾಯು ಮಾಲಿನ್ಯದಿಂದ ಜೀವಿತಾವಧಿಯ ಮೇಲಾಗುವ ಪರಿಣಾಮವು ಮದ್ಯಪಾನ, ಅಸುರಕ್ಷಿತ ನೀರಿಗಿಂತ ಮೂರು ಪಟ್ಟು ಹೆಚ್ಚು. ಎಚ್​ಐವಿ/ಏಡ್ಸ್ ಅಪಾಯಕ್ಕಿಂತ 6 ಪಟ್ಟು, ಭಯೋತ್ಪಾದನೆಗಿಂತ 89 ಪಟ್ಟು ಹೆಚ್ಚು ಅಪಾಯಕಾರಿ ಎಂದು ವಿಶ್ಲೇಷಣೆ ಹೇಳಿದೆ.