ವಶಪಡಿಸಿಕೊಳ್ಳಲಾಗಿರುವ ನಕಲಿ ಕಾರ್ಡ್​ಗಳು 
ನ್ಯೂಸ್

ಆಧಾರ್ ಸೇರಿ 65 ಸಾವಿರ ನಕಲಿ ಐಡಿ ಕಾರ್ಡ್ ಪತ್ತೆ!; ವಂಚಕರ ಬೃಹತ್ ಜಾಲ ಭೇದಿಸಿದ ಖಾಕಿ ಪಡೆ

ಬೆಂಗಳೂರು: ಸರ್ಕಾರದ ಮೋನೋಗ್ರಾಮ್ ಬಳಸಿ ನಕಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಆರ್​ಸಿ ಬುಕ್ ಮತ್ತು ವೋಟರ್ ಐಡಿ ತಯಾರಿಸುತ್ತಿದ್ದ ಬೃಹತ್ ‘ನಕಲಿ ಜಾಲ’ವನ್ನು ಬಲೆಗೆ ಕೆಡವಿರುವ ಸಿಸಿಬಿ ಬರೋಬ್ಬರಿ 65 ಸಾವಿರ ನಕಲಿ ಐಡಿ ಕಾರ್ಡ್ ವಶಪಡಿಸಿಕೊಂಡು 11 ಆರೋಪಿಗಳನ್ನು ಬಂಧಿಸಿದೆ. 2018ರಲ್ಲಿ ರಾಜರಾಜೇಶ್ವರಿನಗರದಲ್ಲಿ ಬೆಳಕಿಗೆ ಬಂದಿದ್ದ ನಕಲಿ ವೋಟರ್ ಐಡಿ ಪ್ರಕರಣ ಹಾಗೂ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಂಧಿತ ಆರೋಪಿಗಳ ಪಾತ್ರವಿರುವ ಬಗ್ಗೆ ಶಂಕೆ ಮೂಡಿದೆ. ಈ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ. ಬಂಧಿತರ ಮನೆಗಳ ಮೇಲೆ ಸರಣಿ ದಾಳಿ ನಡೆಸಿದಾಗ ಎಲ್ಲ ನಕಲಿ ಕಾರ್ಡ್​ಗಳು ಪತ್ತೆಯಾಗಿವೆ.

ಸಾರಿಗೆ ಇಲಾಖೆಯ ಕಾರ್ಡ್​ಗಳ ಮುದ್ರಣದ ಗುತ್ತಿಗೆ ಪಡೆದಿರುವ ಕಂಪನಿಯ ಹಾಲಿ ಹಾಗೂ ಮಾಜಿ ನೌಕರರು ಜಾಲದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳ ಬಳಿ 34 ಸಾವಿರ ನಕಲಿ ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾಗಿರುವುದರಿಂದ ಚುನಾವಣೆಯಲ್ಲಿ ನಕಲಿ ಮತದಾರರು ಮತ ಚಲಾಯಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಕನಕಪುರ ರಸ್ತೆ ಗುಬ್ಬಲಾಳದ ನಿತ್ಯ ಹರಿಟೇಜ್ ಅಪಾರ್ಟ್​ವೆುಂಟ್ ನಿವಾಸಿ, ಕಿಂಗ್​ಪಿನ್ ಕಮಲೇಶ್ ಕುಮಾರ್ ಭವಾಲಿಯಾ (33) ಬಂಧಿತ. ಈತ ಕೊಟ್ಟ ಮಾಹಿತಿ ಮೇರೆಗೆ ಪುಟ್ಟೇನಹಳ್ಳಿಯ ಎಸ್. ಲೋಕೇಶ್ (37), ಶಾಂತಿನಗರದ ಸುದರ್ಶನ್ (50), ನಿರ್ಮಲ್​ಕುಮಾರ್ (56), ಕೆಂಗೇರಿಯ ದರ್ಶನ್ (25), ಹಾಸನ ಜಿಲ್ಲೆ ಗವೇನಹಳ್ಳಿಯ ಶ್ರೀಧರ್(31), ಜ್ಞಾನಭಾರತಿಯ ಕೆಂಚನಪುರ ಕ್ರಾಸ್​ನ ಚಂದ್ರಪ್ಪ (28), ವಿಜಯನಗರದ ಅಭಿಲಾಷ್ (27), ಸರಸ್ವತಿನಗರದ ಶ್ರೀಧರ್ ದೇಶಪಾಂಡೆ (35), ಬಸವೇಶ್ವರನಗರದ ತೇಜಸ್ (30) ಮತ್ತು ಲೋಹಿತ್(29)ರನ್ನು ಬಂಧಿಸಲಾಗಿದೆ.

ಹೇಗಿತ್ತು ಕಾರ್ಯಾಚರಣೆ?: ರಾಜಸ್ಥಾನದ ಕಮಲೇಶ್, ಸರ್ವಿಸ್ ಇಂಜಿನಿಯರ್ ಆಗಿದ್ದು, ಮುಂಬೈನಲ್ಲಿ ಕೆಲಸ ಮಾಡಿದ್ದ. ಆನಂತರ ಬೆಂಗಳೂರಿಗೆ ಬಂದು ಫ್ಲಾ್ಯಟ್​ನಲ್ಲಿ ನೆಲೆಸಿದ್ದ. ಕಂಪನಿಗಳಿಗೆ ಸರ್ವಿಸ್​ಗೆ ಹೋದಾಗ ಇತರ ಆರೋಪಿಗಳು ಪರಿಚಯವಾಗಿದ್ದರು. ಸಾರಿಗೆ ಇಲಾಖೆಯಲ್ಲಿ ಅರ್​ಸಿ ಕಾರ್ಡ್, ಡಿಎಲ್ ಸೇರಿ ಇನ್ನಿತರ ಕಾರ್ಡ್​ಗಳನ್ನು ಮುದ್ರಿಸುವ ಗುತ್ತಿಗೆ ಪಡೆದ ‘ರೋಸ್​ವಾರ್ಟ್ ಟೆಕ್ನಾಲಜಿಕ್ಸ್ ಪ್ರೖೆ.ಲಿ. ಕಂಪನಿ’ಯಲ್ಲಿ ನೌಕರರಾದ ಲೋಕೇಶ್ ಮತ್ತು ಲೋಹಿತ್ ಪರಿಚಯವಾಗಿದ್ದು, ಇದೇ ರೀತಿ ಎಲ್ಲರನ್ನು ಒಟ್ಟುಗೂಡಿಸಿ ನಕಲಿ ಗುರುತಿನ ಜಾಲವನ್ನು ಶುರು ಮಾಡಿದ್ದ. ಈ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು, ಡಿ.30ರಂದು ಕಮಲೇಶ್​ಗೆ ಸೇರಿದ ಫ್ಲಾ್ಯಟ್ ಮೇಲೆ ದಾಳಿ ನಡೆಸಿದಾಗ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ನಕಲಿ ಆಧಾರ್, ಪಾನ್, ಆರ್​ಸಿ ಕಾರ್ಡ್ ಮತ್ತು ಸರ್ಕಾರದ ಗುರುತಿನ ಚೀಟಿಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಕಮಲೇಶ್ ಕುಮಾರ್ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಮೇರೆಗೆ ಸುದರ್ಶನ್ ಮತ್ತು ನಿರ್ಮಲ್ ಕುಮಾರ್​ಗೆ ಸೇರಿದ ಶಾಂತಿನಗರದ ಬ್ರಿಗೇಡ್ ಪ್ರಿಂಟ್ಸ್ ಮತ್ತು ಆರೋಪಿ ಲೋಕೇಶ್ ಮನೆ ಮೇಲೆ ದಾಳಿ ನಡೆಸಲಾಯಿತು. ಅಲ್ಲಿಯೂ ನಕಲಿ ಆಧಾರ್, ಪಾನ್, ಆರ್​ಸಿ ಕಾರ್ಡ್​ಗಳು ಪತ್ತೆಯಾಗಿವೆ. ಹೆಸರು, ವಿಳಾಸ ನಮೂದಿಸದೇ ಇರುವ ಸರ್ಕಾರದ ಮೋನೋಗ್ರಾಮ್ ಹೊಂದಿರುವ ತಲಾ 9 ಸಾವಿರ ಆಧಾರ್, ಪಾನ್ ಕಾರ್ಡ್​ಗಳು, 1200 ಪಡಿತರ ಚೀಟಿ, ಹೆಸರು, ವಿಳಾಸ ಮುದ್ರಿಸಿರುವ 250 ನಕಲಿ ಆರ್​ಸಿ ಕಾರ್ಡ್, 6240 ನಕಲಿ ಚುನಾವಣಾ ಗುರುತಿನ ಚೀಟಿಗಳು, ಹೆಸರು, ವಿಳಾಸ ನಮೂದಿಸದೇ ಇರುವ 28 ಸಾವಿರ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿವೆ. ಕೃತ್ಯಕ್ಕೆ ಬಳಸಿದ್ದ 3 ಲ್ಯಾಪ್​ಟಾಪ್, 3 ಪ್ರಿಂಟರ್, 67 ಸಾವಿರ ರೂ. ಹಾಗೂ 1 ಕಂಪ್ಯೂಟರ್ ಜಪ್ತಿ ಮಾಡಿರುವುದಾಗಿ ಕಮಲ್ ಪಂತ್ ತಿಳಿಸಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಾಖಲೆಗಳನ್ನು ನಕಲಿ ಮತ್ತು ಅಕ್ರಮ ದಾಸ್ತಾನು ಮಾಡಿದ್ದ 11 ಮಂದಿಯ ಗ್ಯಾಂಗ್ ಪತ್ತೆಹಚ್ಚಲಾಗಿದೆ. ಇವರಿಗೆ ಸಾಥ್ ಕೊಟ್ಟವರಿಗೂ ಬಲೆಬೀಸಲಾಗಿದೆ. | ಕಮಲ್ ಪಂತ್ ಬೆಂಗಳೂರು ಪೊಲೀಸ್ ಆಯುಕ್ತ

ಯಾವ್ಯಾವುದಕ್ಕೆ ಬಳಕೆ?

  • ಭಾರತೀಯ ಪ್ರಜೆಗೆ ಬೇಕಾದ ಎಲ್ಲ ರೀತಿಯ ಗುರುತಿನ ಚೀಟಿಗಳನ್ನು ನಕಲಿ ಮಾಡುವ ಜಾಲ
  • ಪಾನ್, ಆಧಾರ್, ಪಡಿತರ ಚೀಟಿ, ಚಾಲನ ಪರವಾನಗಿ, ಮತದಾರರ ಚೀಟಿ, ಆರ್​ಸಿ ಬುಕ್
  • ಕಳ್ಳತನ ಮಾಡಿದ ವಾಹನಗಳಿಗೆ ಇಂಜಿನ್ ನಂಬರ್ ನಮೂದಿಸಿ ನಕಲಿ ಆರ್​ಸಿ ಸ್ಮಾರ್ಟ್ ಕಾರ್ಡ್
  • ನಕಲಿ ದಾಖಲೆ ಬ್ಯಾಂಕ್​ಗಳಿಗೆ ಸಲ್ಲಿಸಿ ಸಾಲ ಪಡೆದಿರುವ ಬಗ್ಗೆಯೂ ತನಿಖೆ ವೇಳೆ ಬೆಳಕಿಗೆ ಬಂದಿದೆ
  • ಬಂಧಿತರಿಂದ ನಕಲಿ ದಾಖಲೆ ಪಡೆದಿರುವ ಫಲಾನುಭವಿಗಳಿಗಾಗಿ ಹುಡುಕಾಟ

ಸರ್ಕಾರಿ ಕಚೇರಿಯಿಂದ ಡೇಟಾ ಕಳವು

ಕೇಂದ್ರ ಮತ್ತು ರಾಜ್ಯ ಸರ್ಕಾರದ ದಾಖಲೆಗಳನ್ನು ಮುದ್ರಿಸುವ ಗುತ್ತಿಗೆ ಪಡೆದಿರುವ ರೋಸ್​ವಾರ್ಟ್ ಟೆಕ್ನಾಲಜಿಕ್ಸ್ ಪ್ರೖೆ.ಲಿ. ಕಂಪನಿಯಲ್ಲಿ ಬಂಧಿತ ಲೋಕೇಶ್ ಮತ್ತು ಲೋಹಿತ್ ಕೆಲಸ ಮಾಡುತ್ತಿದ್ದರು. ಈ ಇಬ್ಬರೂ ಸರ್ಕಾರಕ್ಕೆ ಬರುತ್ತಿದ್ದ ಡೇಟಾವನ್ನು ಕದ್ದು ತಂದು ತಾವೇ ನಕಲಿ ಕಾರ್ಡ್​ಗಳನ್ನು ಮುದ್ರಿಸಿ ವಿತರಣೆ ಮಾಡುತ್ತಿದ್ದರು. 2 ವರ್ಷಗಳಿಂದಲೂ ಆರೋಪಿಗಳು ನಕಲಿ ದಂಧೆಯಲ್ಲಿ ತೊಡಗಿದ್ದರು.

ಹಳ್ಳಿ ಫೈಟ್​ಗೂ ಬಳಕೆ?

2018ರ ರಾಜರಾಜೇಶ್ವರಿನಗರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತ್ತೆಯಾದ ನಕಲಿ ವೋಟರ್ ಐಡಿ ಪ್ರಕರಣದಲ್ಲಿಯೂ ಕೆಲವರ ಪಾತ್ರ ಇರುವುದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿಯೂ ಹೆಸರು ವಿಳಾಸ ನಮೂದಿಸಿರುವ 6240 ವೋಟರ್ ಐಡಿ, ವಿಳಾಸ ಮುದ್ರಿಸದ 28 ಸಾವಿರ ವೋಟರ್ ಐಡಿ ಪತ್ತೆಯಾಗಿವೆ. ಇತ್ತೀಚೆಗೆ ಅಂತ್ಯವಾದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಕಲಿ ವೋಟರ್ ಐಡಿ ಬಳಕೆ ಆಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ.