ನ್ಯೂಸ್

ಏಳು ವರ್ಷದಲ್ಲಿ 60 ಸಾವಿರ ಮೆ.ವಾ. ವಿದ್ಯುತ್ ಉತ್ಪಾದನೆ

ರೈತ ಸೌರಶಕ್ತಿ ಮೇಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ | ತಂತ್ರಜ್ಞಾನಗಳ ಆವಿಷ್ಕಾರ ರೈತರಿಗೆ ಸಿಕ್ಕರಷ್ಟೇ ಸಾರ್ಥಕ

ರಾಜ್ಯದಲ್ಲಿ ಮುಂದಿನ ಏಳು ವರ್ಷದಲ್ಲಿ 60 ಸಾವಿರ ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೊಷಿಸಿದರು. ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಇಂಧನ ಇಲಾಖೆ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ದ ಉದ್ಘಾಟನೆ, ‘ಕುಸುಮ್ ಬಿ ಮತ್ತು ಸಿ ಯೋಜನೆ ಹಾಗೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರಸ್ತುತ 32 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯವು ಸ್ವಾವಲಂಬಿಯಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದರೂ, ಪಂಪ್​ಸೆಟ್​ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ರೈತರಿಗೆ ನೀಡುತ್ತಿರುವ 7 ತಾಸು ನಿರಂತರ ವಿದ್ಯುತ್ ಅನ್ನು ಇನ್ನೂ ಕೆಲ ಗಂಟೆ ವಿಸ್ತರಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ನವೀಕರಿಸಬಹುದಾದ ಇಂಧನ ಸಹಿತ ಒಟ್ಟಾರೆ ಉತ್ಪಾದನೆಯನ್ನು ಏಳು ವರ್ಷಗಳಲ್ಲಿ ದ್ವಿಗುಣಗೊಳಿಸಲಾಗುವುದು ಎಂದರು.

ರೈತರಿಗೆ ಆವಿಷ್ಕಾರ ತಲುಪಿಸಿ: ಏಷ್ಯಾದಲ್ಲೇ ಅತೀ ದೊಡ್ಡ ಸೌರ ಪಾರ್ಕ್ ನಮ್ಮ ಅಧಿಕಾರಾವಧಿಯಲ್ಲೇ ಸ್ಥಾಪಿಸಲಾಗಿದೆ. ಈಗ ಇನ್ನಷ್ಟು ಸೌರೀಕರಣ ಯೋಜನೆಗಳನ್ನು ವಿಸ್ತರಿಸುವತ್ತ ಚಿತ್ತ ಹರಿಸಲಾಗಿದೆ. ಕೃಷಿ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿದಾಗ ಮಾತ್ರ ವ್ಯವಸಾಯ ವಲಯದಲ್ಲಿ ಅವು ಬಳಕೆಯಾಗಿ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆ ನಡೆದಲ್ಲಿ ರೈತರ ಬೆಳೆ ವೈವಿಧ್ಯ ಹಾಗೂ ಇಳುವರಿ ಹೆಚ್ಚಳದಿಂದ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.

3,000 ಮೆ.ವಾ. ಉತ್ಪಾದನೆ: ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸೌರ ವಿದ್ಯುತ್ ಪೂರೈಸುವ ಯೋಜನೆಯಡಿ 10 ಎಚ್​ಪಿವರೆಗೆ ಸಬ್ಸಿಡಿ ನೀಡಲಾಗುವುದು. ಫಲಾನುಭವಿಗಳಿಗೆ ತ್ವರಿತವಾಗಿ ಯೋಜನೆ ತಲುಪಿಸಲು ಆಪ್ ಸಿದ್ಧಪಡಿಸಿದ್ದು, ರೈತರು ಇಷ್ಟಪಟ್ಟ ಕಂಪನಿಯ ಉಪಕರಣಗಳನ್ನು ಪಡೆದುಕೊಳ್ಳಬಹುದು. ಸೌರ ವಿಭಾಗದಿಂದ 3,000 ಮೆ.ವಾ. ವಿದ್ಯುತ್ ಉತ್ಪಾದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು. ಸಚಿವ ಡಾ. ಎಂ.ಸಿ.ಸುಧಾಕರ್, ನಜೀರ್ ಅಹಮದ್, ಇಂಧನ ಇಲಾಖೆಯ ಎಸಿಎಸ್ ಗೌರವ್ ಗುಪ್ತಾ, ಕೆಆರ್​ಇಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಇತರರಿದ್ದರು.

ಆನ್​ಲೈನ್ ಪೋರ್ಟಲ್​ನಲ್ಲಿ ಅರ್ಜಿ ಆಹ್ವಾನ

ಸೋಲಾರ್ ಪಂಪ್​ಸೆಟ್ ಅಳವಡಿಸಿಕೊಳ್ಳುವ ರೈತರಿಗಾಗಿಯೇ ಆನ್​ಲೈನ್ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ. ಕ್ರೆಡೆಲ್ ವೆಬ್​ಸೈಟ್ ಮೂಲಕ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಶೀಘ್ರವೇ ವಿವರಗಳನ್ನು ಒದಗಿಸಲಾಗುತ್ತದೆ. ಜತೆಗೆ ‘ಸೌರ ಮಿತ್ರ ಆಪ್’ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.

"ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯಡಿ ನಾಡಿನ 1.20 ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಂಡಿವೆ. ಇದಕ್ಕಾಗಿ ಈವರೆಗೆ 5,320 ಕೋಟಿ ರೂ. ಹಣವನ್ನು ಇಂಧನ ಇಲಾಖೆಗೆ ನೀಡಲಾಗಿದೆ. ಇದರಿಂದ ನಾಗರಿಕರಿಗೆ ಶೂನ್ಯ ಬಿಲ್ ಬರುತ್ತಿದೆ"- ಸಿದ್ದರಾಮಯ್ಯ. ಮುಖ್ಯಮಂತ್ರಿ.

"ಸೌರೀಕರಣ ಯೋಜನೆಯಡಿ 40 ಸಾವಿರ ಪಂಪ್​ಸೆಟ್​ಗಳಿಗೆ ಸೌರ ವಿದ್ಯುತ್ ಪೂರೈಸಲು ಟೆಂಡರ್ ಕರೆಯಲಾಗಿದೆ. ರೈತರಿಗೆ ಯೋಜನೆಯ ಲಾಭ ತಲುಪಿಸಲು ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು. ಕೃಷಿಕರಿಗೆ ಬಳಕೆ ಹಾಗೂ ಇತರ ಮಾಹಿತಿ ಒದಗಿಸಲು ಕೆಪಿಟಿಸಿಎಲ್ ಮೂಲಕ ತರಬೇತಿ ಕೊಡಿಸಲು ಚಿಂತನೆ ನಡೆದಿದೆ" - ಟಿ.ಡಿ.ರಾಜೇಗೌಡ, ಕೆಆರ್​ಇಡಿಎಲ್ ಅಧ್ಯಕ್ಷ

ಸಬ್ಸಿಡಿ ಮೊತ್ತ ಹೆಚ್ಚಳ

ಸೋಲಾರ್ ವಿದ್ಯುತ್ ಪಂಪ್​ಸೆಟ್ ಹಾಗೂ ಪ್ಯಾನಲ್​ಗಳಿಗೆ ಕೇಂದ್ರ ಸರ್ಕಾರ ಶೇ.30 ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರದ ಸಬ್ಸಿಡಿ ಮೊತ್ತವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಈ ಸೌಲಭ್ಯವನ್ನು ಕೃಷಿಕರು ಸದ್ಬಳಕೆ ಮಾಡಿಕೊಂಡರೆ ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಸಾಧ್ಯ ಎಂದು ಸಿಎಂ ವಿವರಿಸಿದರು.