ಕಾರ್ಗಲ್: ಶರಾವತಿ ಕಣಿವೆ ಹಾಗೂ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಅಣೆಕಟ್ಟೆಯ ಸುರಕ್ಷೆ ಹಾಗೂ ಶರಾವತಿ ನದಿ ಪಾತ್ರದ ಜನರ ಹಿತದೃಷ್ಟಿ ಇಟ್ಟುಕೊಂಡು ನೀರನ್ನು ಹೊರಹರಿಸುವ ಲೆಕ್ಕಚಾರವನ್ನು ಕೆಪಿಸಿ ಮಾಡಿದೆ. ಲಿಂಗನಮಕ್ಕಿ ಜಲಾಶಯವು ಈ ಬಾರಿಯೂ ಅವಧಿಗಿಂತ ಮೊದಲೇ ಭರ್ತಿಯಾಗುವ ಲಕ್ಷಣಗಳಿವೆ.
ಲಿಂಗನಮಕ್ಕಿ ಜಲಾಶಯ ಶೇ. 75 ಭರ್ತಿಯಾಗಿದ್ದು, ಅಣೆಕಟ್ಟೆಯ ಕೆಳದಂಡೆ ಹಾಗೂ ನದಿಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಕೆಪಿಸಿಯು ಪ್ರವಾಹ ಮುನ್ಸೂಚನೆಯ ಎರಡನೇ ನೋಟಿಸ್ ಅನ್ನು ಶುಕ್ರವಾರ ಜಾರಿ ಮಾಡಿದೆ.
ಜಲಾಶಯದ ನೀರಿನ ಮಟ್ಟ 1812 ಅಡಿ ತಲುಪಿದಾಗ ಕೆಪಿಸಿ ನಿಗಮದ ಇಂಜಿನಿಯರ್‌ಗಳ ಜತೆ ಸಭೆ ನಡೆಸಿ ಹೆಚ್ಚುವರಿ ನೀರನ್ನು ರೇಡಿಯಲ್ ಗೇಟ್ ಮೂಲಕ ನದಿಗೆ ಹೊರಹರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕೆಪಿಸಿ ಲಿಂಗನಮಕ್ಕಿ ಅಣೆಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್ ತಿಳಿಸಿದರು. ಪ್ರತಿ ಗಂಟೆಗೊಮ್ಮೆ ಜಲಾಶಯದ ಒಳಹರಿವಿನ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ನಿರ್ವಹಣೆಗೆ ಸಂಬಂಧಿಸಿ ಲಿಂಗನಮಕ್ಕಿ ಅಣೆಕಟ್ಟೆಯ ಎಲ್ಲ ಹನ್ನೊಂದು ರೇಡಿಯಲ್ ಗೇಟ್‌ಗಳು ಸುಸ್ಥಿತಿಯಲ್ಲಿವೆ. ತಲಾ 60 ಟನ್ ತೂಕದ ಪ್ರತಿ ರೇಡಿಯಲ್ ಗೇಟ್ ಎತ್ತಲು ಮತ್ತು ಇಳಿಸಲು ಅನುಕೂಲವಾಗುವಂತೆ ಅಳವಡಿಸಿರುವ ಮೋಟಾರ್ ಉತ್ತಮವಾಗಿದೆ. ವಿದ್ಯುತ್ ಕೈಕೊಟ್ಟ ಸಂದರ್ಭ ಪರ್ಯಾಯವಾಗಿ ಡೀಸೆಲ್ ಜನರೇಟರನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಲಿಂಗನಮಕ್ಕಿ ಜಲಾಶಯದ ಗೇಟ್ಸ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಕೆ.ಪಿ.ಲೋಹಿತ್ ಮಾಹಿತಿ ನೀಡಿದರು. ಈ ಬಾರಿ ಜೂನ್‌ನಿಂದ ಇಲ್ಲಿಯವರೆಗೆ 1959 ಮಿ.ಮೀ ಮಳೆಯಾಗಿದೆ. ಆದರೆ ಕಳೆದ ವರ್ಷ ಇದೇ ಹೊತ್ತಿಗೆ 2633 ಮಿ.ಮೀ ಮಳೆಯಾಗಿದ್ದರೂ ಜಲಾಶಯದಲ್ಲಿ 1802.70 ಅಡಿ ನೀರಿನ ಸಂಗ್ರಹವಿತ್ತು.