ನ್ಯೂಸ್

60 ಪರ್ಸೆಂಟ್ ಕಮಿಷನ್ ಗ್ಯಾರಂಟಿ ಕಾಂಗ್ರೆಸ್ ಸರ್ಕಾರ: ಛಲವಾದಿ ಟೀಕೆ | Power battle in Cong party

ಬೆಂಗಳೂರು: ಡಿನ್ನರ್ ಕೂಟಗಳ ಮೂಲಕ ಬಲಪ್ರದರ್ಶನ, ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಮರೆತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ರೈತರು ಸೇರಿ ಜನಸಾಮಾನ್ಯರ ಬವಣೆಗೆ ಸ್ಪಂದಿಸುತ್ತಿಲ್ಲ, ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ವಿಧಾನಸಭೆ ಚುನಾವಣೆ ಪೂರ್ವ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿ ಗುತ್ತಿಗೆದಾರರ ಸಂಘದಿಂದ ಕಾಂಗ್ರೆಸ್ಸಿಗರು ಪತ್ರ ಬರೆಯಿಸಿದ್ದರು. ಸಮರ್ಥವಾಗಿ ಉತ್ತರಿಸಲು ಬಿಜೆಪಿಗೆ ಸಾಧ್ಯವಾಗಿದ್ದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಒಪ್ಪಿಕೊಂಡರು.

60 ಪರ್ಸೆಂಟ್ ಕಮಿಷನ್ ಗ್ಯಾರಂಟಿ

ಕಾಂಗ್ರೆಸ್‌ನದು 60 ಪರ್ಸೆಂಟ್ ಕಮಿಷನ್ ಗ್ಯಾರಂಟಿ ಸರ್ಕಾರವೆಂಬುದು ಗುತ್ತಿಗೆದಾರರ ಸಂಘವು ಬರೆದ ಎಚ್ಚರಿಕೆ ಪತ್ರದಿಂದ ದೃಢಪಟ್ಟಿದೆ. ಸಂಘದವರು ನೇರವಾಗಿ ಏಳು ಸಚಿವರಿಗೆ ಪತ್ರ ಬರೆದು ತಮ್ಮ ಕಷ್ಟ-ಕಾರ್ಪಣ್ಯ ತೋಡಿಕೊಂಡಿದ್ದಾರೆ.

ವಿವಿಧ ಇಲಾಖೆಗಳಡಿ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮೊತ್ತ 32 ಸಾವಿರ ಕೋಟಿ ರೂ. ಪಾವತಿಸುತ್ತಿಲ್ಲ. ಬಿಲ್ ಜೇಷ್ಠತೆ ಪರಿಗಣಿಸದೆ ಸಚಿವರ ಒತ್ತಾಸೆಯಂತೆ ಪಾವತಿಸಲಾಗುತ್ತಿದೆ. ಜತೆಗೆ 60 ಪರ್ಸೆಂಟ್ ಕಮಿಷನ್ ಕಿರುಕುಳ ಗುತ್ತಿಗೆದಾರರನ್ನು ಅಸಹಾಯಕ ಸ್ಥಿತಿಗೆ ದೂಡಿದೆ ಎಂದು ಈ ಪತ್ರದಲ್ಲಿ ಅಲವತ್ತುಕೊಂಡಿದ್ದಾರೆ.

ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಈ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿಗೆ ಗುತ್ತಿಗೆದಾರರ ಸಂಘ ಒತ್ತಾಯಿಸಿದ್ದರೆ, ಸಚಿವ ಪ್ರಿಯಾಂಕ್ ಖರ್ಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ ಹೂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕುಟುಕಿದರು.

ಹಿಂದಿನ ಬಿಜೆಪಿ ಸರ್ಕಾರ ಸಾಲ ಮಾಡಿ ತುಪ್ಪ ತಿಂದಿದೆ. ಅವರು ಮಾಡಿದ ಸಾಲಕ್ಕೆ ನಾವು ಬಡ್ಡಿ ಪಾವತಿಸುತ್ತಿದ್ದೇವೆ. ಅನುದಾನ ಮೀರಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದರಿಂದ ಬಿಲ್ ಬಾಕಿ ಉಳಿದಿದೆ ಎಂಬ ಸಬೂಬು ನೀಡಿದ್ದಾರೆ.

ಹಿಂದಿನ ಸರ್ಕಾರದ ಸಾಲ, ಬಡ್ಡಿ ಮರು ಪಾವತಿ, ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿ ಹೊಸದು ಎನ್ನುವಂತೆ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ 2013-18ರ ಆಡಳಿತಾವಧಿಯಲ್ಲಿ ಎರಡು ಲಕ್ಷ ಕೋಟಿ ರೂ. ಅಧಿಕ ಸಾಲ ಮಾಡಿದ್ದೇಕೆ ?, ನಂತರ ಬಂದ ಸರ್ಕಾರ ಬಾಕಿ ಬಿಲ್‌ಗಳಿಗೆ ಹಣ ಪಾವತಿಸಿದ್ದೇಕೆ ? ಎಂಬ ಪ್ರಶ್ನೆಗಳಿಗೂ ಉತ್ತರಿಸಲಿ ಎಂದು ಸವಾಲೆಸೆದರು.

ಸರ್ಕಾರದ ಬೊಕ್ಕಸ ಬರಿದಾಗಿ ಗುತ್ತಿಗೆದಾರರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದ್ದು, ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲವೆಂಬ ಬೇಸರ ಹೊರ ಹಾಕಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.