ಲಖನೌ: ಸರ್ಕಾರಗಳು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹಾಗೂ ಕಾಯ್ದೆ ರೂಪಿಸಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ.
ಇದೀಗ ಆಘಾತಕಾರಿ ಘಟನೆಯೊಂದರಲ್ಲಿ ಯುವತಿಯೊಬ್ಬಳನ್ನು ಆಕೆಯ ಮನೆಯಿಂದ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಉತ್ತರಪ್ರದೇಶದ ಜೌನ್ಪುರ ಜಿಲ್ಲೆಯ ಮಚ್ಲಿಪುರಸಹರ್ನ ರಸೂಲಾಬಾದ್ ಎಂಬಲ್ಲಿ ನಡೆದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜೌನ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಜಯ್ ಪಾಲ್ ಆರು ಮಂದಿ ಯುವಕರು ಸಂತ್ರಸ್ತೆಯನ್ನು ಆಕೆಯ ಮನೆಯಿಂದ ಅಪಹರಿಸಿ ಗ್ರಾಮದ ಖಾಲಿ ಜಾಗದಲ್ಲಿ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ. ಈ ವೇಳೆ ಯುವತಿ ಜೋರಾಗಿ ಚೀರಿಕೊಂಡಿದ್ದು, ಆಕೆಯ ಮೇಲೆ ದುರುಳರು ಅಮಾನುಷವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಯುವತಿಯ ಕೂಗನ್ನು ಕೇಳಿ ಸ್ಥಳೀಯರು ದೌಡಾಯಿಸಿದ್ದು, ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳು ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದು ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಜಯ್ ಪಾಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಯುವತಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಗಳು ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಹಲ್ಲೆ ಮಾಡುತ್ತಿರುವುದು ಕಂಡು ಬರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯದ ಕುರಿತು ಕೆಲವರು ಪ್ರಶ್ನೆ ಎತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.