ನ್ಯೂಸ್

ವಿಚ್ಛೇದನಕ್ಕೆ ಬೇಡ ಅವಸರ; 6 ತಿಂಗಳ ಕಾಯುವಿಕೆ ಕಡ್ಡಾಯವಲ್ಲ ಎಂದ ಸುಪ್ರೀಂ ಕೋರ್ಟ್

ವಿಚ್ಛೇದನ ಪ್ರಕರಣದಲ್ಲಿ ಆರು ತಿಂಗಳು ಕಾಯುವಿಕೆ ಇನ್ನು ಕಡ್ಡಾಯವಲ್ಲ. ಸಂಬಂಧವು ಸರಿಪಡಿಸಲು ಸಾಧ್ಯವಾಗದಷ್ಟು ಹದಗೆಟ್ಟರೆ, ಕೌಟುಂಬಿಕ ನ್ಯಾಯಾಲಯದ ಅಗತ್ಯವೂ ಇಲ್ಲದೇ ವಿಚ್ಛೇದನ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅಡಿಯಲ್ಲಿ ಸೂಚಿಸಿದಂತೆ, ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕಾಗಿ ಕಡ್ಡಾಯವಾಗಿ ಕಾಯುವ ಅವಧಿಯನ್ನು ರದ್ದುಗೊಳಿಸಬೇಕೆಂದು ಕೋರಿ ಹಲವು ಮಂದಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ನ ಸಂವಿಧಾನ ಪೀಠವು, ಸಂವಿಧಾನದ ವಿಧಿ 142ರ ಅನುಸಾರ ಲಭ್ಯವಿರುವ ವಿಶೇಷ ವಿವೇಚನಾಧಿಕಾರದ ಅನುಸಾರ ಈ ತೀರ್ಪು ನೀಡಿದೆ.

ತನ್ನ ಮುಂದೆ ವಿಚಾರಣೆಗೆ ಬರುವ ಯಾವುದೇ ವಿಷಯದಲ್ಲಿ ‘ಸಂಪೂರ್ಣ ನ್ಯಾಯವನ್ನು ನೀಡಲು’ ಅಗತ್ಯವಾದ ತೀರ್ಪಗಳು ಮತ್ತು ಆದೇಶಗಳನ್ನು ನೀಡಲು ಸುಪ್ರೀಂ ಕೋರ್ಟ್​ಗೆ ಈ ವಿಧಿಯು ವಿವೇಚನಾಧಿಕಾರವನ್ನು ನೀಡುತ್ತದೆ. ಈಗ ಇರುವ ನಿಯಮವೆಂದರೆ, ಕೌಟುಂಬಿಕ ನ್ಯಾಯಾಲಯವು ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆಯಲು ಆರು ತಿಂಗಳ ಕಾಲಾವಕಾಶ ನೀಡುತ್ತದೆ. ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಆರು ತಿಂಗಳ ಕಾಲ ಕಾಯುವುದು ಕಡ್ಡಾಯವಾಗಿತ್ತು. ಆದರೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ತ್ವರಿತವಾಗಿ ವಿಚ್ಛೇದನ ಪಡೆಯಲು ಅನುಕೂಲವಾಗಬಹುದಾಗಿದೆ ಎನ್ನಬಹುದಾದರೂ ವಿವಾಹ ಸಂಬಂಧವು ಸರಿಪಡಿಸಲು ಸಾಧ್ಯವೇ ಆಗದಷ್ಟು ಹದಗೆಟ್ಟ ಸಂದರ್ಭದಲ್ಲಿ ಈ ರೀತಿ ಮಾಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿರುವುದು ಗಮನಾರ್ಹವಾಗಿದೆ. ಅಂದರೆ, ಪತಿ-ಪತ್ನಿ ಕೂಡಿಬಾಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ಕಾಯುವಿಕೆ ಅಗತ್ಯವಿಲ್ಲ ಎಂದು ಅದು ಹೇಳಿದೆ. ಇದೇ ವೇಳೆ ನ್ಯಾಯಾಲಯವು ವಿವಾಹವನ್ನು ರದ್ದುಪಡಿಸಲು ಕಕ್ಷಿದಾರರು ನೇರವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ಗಳಿಗೆ ಮೊರೆ ಹೋಗಲು ಸಾಧ್ಯವಿಲ್ಲ ಎಂಬ ಹಿಂದಿನ ತೀರ್ಪಗಳನ್ನು ಎತ್ತಿಹಿಡಿದಿರುವುದು ಮಹತ್ವದ್ದಾಗಿದೆ. ಕೆಳನ್ಯಾಯಾಲಯದಲ್ಲಿ ಪರಿಹಾರ ದೊರೆಯದಿದ್ದಾಗ ಮಾತ್ರವೇ ಉನ್ನತ ನ್ಯಾಯಾಲಯಗಳನ್ನು ಸಂರ್ಪಸಬೇಕು ಎಂದು ಸೂಚಿಸಿದೆ.

ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ 2017ರಲ್ಲಿ ನಿಷೇಧಿಸಿ ತೀರ್ಪು ನೀಡಿದ್ದು ಈ ಸಂದರ್ಭದಲ್ಲಿ ಉಲ್ಲೇಖಾರ್ಹವಾಗಿದೆ. ಅಂದರೆ, ವಿಚ್ಛೇದನ ಪಡೆಯುವಲ್ಲಿ ಪತಿ-ಪತ್ನಿ ಅವಸರ ತೋರಬಾರದು, ಕೂಡಿ ಬಾಳಲು ಸಾಧ್ಯವೇ ಇಲ್ಲದಂತಹ ಸಂದರ್ಭದಲ್ಲಿ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಬೇಕೆಂಬ ನಿಲುವನ್ನೇ ಕೋರ್ಟ್ ಈಗಲೂ ತೋರಿದೆ. ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿಯೂ ವಿಚ್ಛೇದನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಸಿಟ್ಟಿನ ಭರದಲ್ಲೋ, ಪ್ರತಿಷ್ಠೆಯ ಕಾರಣಕ್ಕಾಗಿಯೋ ಗಂಡಿ-ಹೆಂಡಿರ ಜಗಳ ತಾರಕಕ್ಕೆ ಹೋಗಿ ಕೋರ್ಟ್ ಮೆಟ್ಟಿಲೇರುತ್ತವೆ. ಕೆಳ ನ್ಯಾಯಾಲಯದಲ್ಲಿ ವಿಚಾರಣೆ, ಆಪ್ತ ಸಮಾಲೋಚನೆ ಮೂಲಕ ಸಂಬಂಧ ತಿಳಿಗೊಳಿಸಿ ಒಗ್ಗೂಡಿಸುವ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳು ಇದ್ದೇ ಇರುತ್ತವೆ. ಕೌಟುಂಬಿಕ ವ್ಯವಸ್ಥೆ ಭಾರತವು ವಿಶ್ವಕ್ಕೆ ನೀಡಿರುವ ವಿಶಿಷ್ಟ ಕೊಡುಗೆಯಾಗಿದ್ದು, ಬದಲಾದ ಜೀವನಶೈಲಿಯಿಂದಾಗಿ ಈ ವ್ಯವಸ್ಥೆಯ ಮೇಲೆ ಪರಿಣಾಮಗಳು ಉಂಟಾಗುತ್ತಿವೆ. ಈ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲೂ ಇದೆ.