ಜಾಜ್ಪುರ: ಒಡಿಶಾದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ಗೂಡ್ಸ್ ರೈಲಿಗೆ ಸಿಲುಕಿ ಕನಿಷ್ಠ ಆರು ಕಾರ್ಮಿಕರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾಜ್ಪುರ ರೋಡ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಕಾರ್ಮಿಕರು ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಂಡಮಾರುತದಿಂದಾಗಿ ದಿಢೀರ್ ಗುಡುಗು ಸಹಿತ ಮಳೆಯಾಗಿದೆ. ಕೂಡಲೇ ಕಾರ್ಮಿಕರು ಮಳೆಯಿಂದ ಪಾರಾಗಲು ಅಲ್ಲಿಯೇ ನಿಂತಿದ್ದ ಗೂಡ್ಸ್ ರೈಲಿನ ಅಡಿಯಲ್ಲಿ ಆಶ್ರಯವನ್ನು ಪಡೆದಿದ್ದಾರೆ.
ದುರದೃಷ್ಟವಶಾತ್, ಈ ರೈಲನ್ನು ಯಾವುದೇ ಎಂಜಿನ್ಗೆ ಜೋಡಿಸಿರಲಿಲ್ಲ. ಹೀಗಾಗಿ ಮಳೆ ಗಾಳಿಗೆ ಸಿಲುಕಿ ರೈಲು ತನ್ನಷ್ಟಕ್ಕೆ ತಾನೇ ಚಲಿಸಲು ಆರಂಭಸಿದ್ದು ಅಪಘಾತಕ್ಕೆ ಕಾರಣವಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಆದೇಶಿಸಿದ್ದಾರೆ.(ಏಜೆನ್ಸೀಸ್)