ರಾಜಮಂಡ್ರಿ: ಒಂದಲ್ಲ, ಎರಡಲ್ಲ ಬರೋಬ್ಬರಿ 108 ಬೈಕ್ಗಳನ್ನು ಕಳುವು ಮಾಡಿದ ಖತರ್ನಾಕ್ ಖದೀಮರಿಬ್ಬರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕವದಿ ನಾನಿ ಸಿಂಗಮ್ ಮತ್ತು ಬಂಡಿ ಶಿವ ಎಂದು ಗುರುತಿಸಲಾಗಿದೆ. ಇಬ್ಬರು ಸಹ ಈಸ್ಟ್ ಗೋದಾವರಿ ಜಿಲ್ಲೆಯ ಅಲಮರು ಮಂಡಲದ ಮಡಿಕಿ ಗ್ರಾಮದವರು. ಬಂಧಿತರಿಂದ ಸುಮಾರು 43 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಹೊರತುಪಡಿಸಿದರೆ, ಪ್ರಕರಣದಲ್ಲಿ ಇತರೆ ಆರೋಪಿಗಳಾದ ಕಾಥೆಟಿ ಚಿನ್ನ, ಸಿಂಗಿದಿ ಹರಿ ದುರ್ಗ ಪ್ರಸಾದ್, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಎಂಬುವವರನ್ನು ಬಂಧಿಸಲಾಗಿದೆ. ಇವರು ಕದ್ದ ಬೈಕ್ಗಳನ್ನು ಕೊಂಡು ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವೃತ್ತಿಯಲ್ಲಿ ಮೇಸನ್ ಆಗಿರುವ ಕವದಿ ನಾನಿ ಸಿಂಗಮ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಇತ್ತೀಚೆಗಷ್ಟೇ ಬೈಕ್ ಕದ್ದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. 2016ರಲ್ಲಿ ಜೆಸಿಬಿ ಆಪರೇಟರ್ ಆಗಿ ಅಬುದಾಬಿಗೆ ತೆರಳಿದ್ದ ಈತ 2018ರವರೆಗೆ ಕೆಲಸ ಮಾಡಿದ್ದ. ಪ್ರಕರಣದ ಮತ್ತೊಬ್ಬ ಆರೋಪಿ ಬಂಡಿ ಶಿವ ಕೂಡ ಮೇಸನ್ ಆಗಿದ್ದು, ಈತ ನಾನಿ ಸಿಂಗಮ್ ಸೋದರ ಸಂಬಂಧಿ. ಸುಲಭವಾಗಿ ಹಣ ಸಂಪಾದಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳು ಐಶಾರಾಮಿ ಜೀವನವನ್ನು ಸಹ ನಡೆಸುತ್ತಿದ್ದರು.
ತಾವು ಗುರಿಯಾಗಿರಿಸಿದ ವಾಹನಗಳನ್ನು ಕದಿಯಲು ನಕಲಿ ಕೀಗಳನ್ನು ಬಳಸುತ್ತಿದ್ದರು ಅಥವಾ ಲಾಕ್ಗಳನ್ನು ಮುರಿದು ಬೈಕ್ ಕದ್ದೊಯ್ಯುತ್ತಿದ್ದರು. ಬಳಿಕ ಬೈಕ್ಗಳನ್ನು ಕಾಥೇಟಿ ಚಿನ್ನ, ಸಿಂಗುಡಿ ಹರಿ ದುರ್ಗ ಪ್ರಸಾದ್, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಸಹಾಯದಿಂದ ಮಾರಾಟ ಮಾಡುತ್ತಿದ್ದರು. ಈ ನಾಲ್ವರು ಆರೋಪಿಗಳು ಗ್ರಾಹಕರಿಂದ ಮುಂಗಡವಾಗಿ 7 ರಿಂದ 10 ಸಾವಿರ ರೂ. ತೆಗೆದುಕೊಳ್ಳುತ್ತಿದ್ದರು. ಬಳಿಕ ಸಿಂಗಮ್ ಮತ್ತು ಶಿವನಿಂದ ಬೈಕ್ಗಳನ್ನು ಸಂಗ್ರಹಿಸಿ ಆರ್ಸಿ ಬುಕ್ ವ್ಯವಸ್ಥೆ ಮಾಡಿದ ಬಳಿಕ ಉಳಿದ ಹಣವನ್ನು ಪಡೆದುಕೊಳ್ಳುತ್ತಿದ್ದರು. ನಿರಂತರವಾಗಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗುವುದನ್ನು ನೋಡಿ ಎಚ್ಚೆತ್ತ ಪೊಲೀಸರು ಹೊಂಚು ಹಾಕಿ ಖದೀಮರನ್ನು ಹಿಡಿದಿದ್ದಾರೆ.
ಸುಮಾರು 108 ಬೈಕ್ಗಳನ್ನು ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಈಸ್ಟ್ ಗೋದಾವರಿ ಜಿಲ್ಲೆಯಿಂದ 34, ವೆಸ್ಟ್ ಗೋದಾವರಿ ಜಿಲ್ಲೆಯಲ್ಲಿ 22, ವಿಶಾಖಪಟ್ಟಣಂದಿಂದ 43, ವಿಜಯವಾಡದಿಂದ 7 ಮತ್ತು ವಿಜಯನಗರಂದಿಂದ ಎರಡು ಬೈಕ್ಗಳನ್ನು ಕದ್ದಿದ್ದಾರೆ. ಸದ್ಯ ಬಂಧಿತವಾಗಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 379, 411 ಮತ್ತು 413ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)