ನ್ಯೂಸ್

ಸಖತ್​ ಐಡಿಯಾ ಗುರು| ರೈತರ ಆರ್ಥಿಕ ಅಭಿವೃದ್ಧಿಗೆ 6 ಸೂತ್ರ

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ರೈತರ ಆರ್ಥಿಕ ಅಭಿವೃದ್ಧಿಗೆ 6 ಸೂತ್ರ

ಕರೊನಾ ಕಾರಣದಿಂದಾಗಿ ನಗರಗಳಿಂದ ಹಳ್ಳಿಗಳಿಗೆ ಬಂದವರು ಕೃಷಿಯಲ್ಲಿ ತೊಡಗಿದ್ದಾರೆ. ಅದರಿಂದ ಕೃಷಿ ಚಟುವಟಿಕೆ ವೇಗ ಪಡೆದಿದೆ. ಈ ಕೆಳಗಿನ 6 ಅಂಶಗಳಿಂದ ಕೃಷಿಯನ್ನು ಇನ್ನಷ್ಟು ಲಾಭದಾಯಕ ಮಾಡಲು ಸಾಧ್ಯವಿದೆ.

1. ಒಳಹರಿವು ನಿರ್ವಹಣೆ: ಕೃಷಿಗೆ ಅಗತ್ಯವಿರುವ ಪ್ರಾಥಮಿಕ ಅಂಶಗಳನ್ನು ನಿರ್ವಹಿಸಿ ಅದರಿಂದ ಬೆಳೆ ಬೆಳೆಯುವುದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು.

2. ವಿವಿಧೀಕರಣ: ಒಂದು ಬೆಳೆಯ ಜತೆ ಮತ್ತೊಂದು ಬೆಳೆ ಬೆಳೆಯಬೇಕು. ಅಡಿಕೆ ತೋಟದಲ್ಲಿ ಕಾಳುಮೆಣಸು, ರಾಗಿ ಜತೆ ಮೆಣಸಿನಕಾಯಿ, ಟೊಮೆಟೋ... ಹೀಗೆ.

3. ಯಾಂತ್ರೀಕರಣ: ಕಾರ್ವಿುಕರ ಕೊರತೆ ನೀಗಿಸಲು, ಕೃಷಿಯ ವೇಗ ಹೆಚ್ಚಿಸಲು ಯಂತ್ರಗಳ ಬಳಕೆ ಹೆಚ್ಚಿಸಬೇಕು.

4. ಮನೆಗಳಿಗೆ ನೇರ ಪೂರೈಕೆ: ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಕೊಂಡೊಯ್ದು, ಮಧ್ಯವರ್ತಿಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅದರ ಬದಲು ರೈತರೇ ಜನರ ಮನೆಗಳಿಗೆ ಪೂರೈಸಬೇಕು.

5. ಪ್ರಾಥಮಿಕ ಸಂಸ್ಕರಣೆ: ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅದರ ಬೆಲೆ ಕಡಿಮೆ. ಬದಲಿಗೆ ಉತ್ಪನ್ನಗಳ ಸ್ವಚ್ಛತೆ, ಪ್ಯಾಕಿಂಗ್ ಬಗ್ಗೆ ಗಮನಹರಿಸಿದರೆ ಬೆಲೆ ಹೆಚ್ಚುತ್ತದೆ.

6. ಮಾಹಿತಿ ಜ್ಞಾನ ಹೆಚ್ಚಿಸಿಕೊಳ್ಳುವುದು: ಯಾವ ಬೆಳೆಗೆ ಯಾವ ಗೊಬ್ಬರ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಕ್ರಮ, ಹವಾಮಾನ ಮುಂತಾದ ಮಾಹಿತಿ ಪಡೆಯಬೇಕು. ಈ ಆರು ಅಂಶಗಳ ಮೂಲಕ ಕೃಷಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

| ಅಯ್ಯಪ್ಪನ್ ನಿವೃತ್ತ ಕುಲಪತಿ, ಮಣಿಪುರ ಕೇಂದ್ರೀಯ ವಿಶ್ವವಿದ್ಯಾಲಯ