ನ್ಯೂಸ್

ಭೋವಿ ನಿಗಮದಲ್ಲಿ 59.68 ಕೋಟಿ ದುರ್ಬಳಕೆ

ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ 59.68 ಕೋಟಿ ರೂ. ವಂಚನೆ ಬೆಳಕಿಗೆ ಬಂದಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು.ಚಂದ್ರನಾಯಕ್, ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್. ಲೀಲಾವತಿ, ಮಾಜಿ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಮತ್ತು ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

2021-22 ಮತ್ತು 2022-23ನೇ ಸಾಲಿನ ಪ್ರಥಮ ತ್ರೈ ಮಾಸಿಕ (ಜೂನ್)ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿ ಹಣಕಾಸು ದುರ್ಬಳಕ್ಕೆ ಮಾಡಿಕೊಂಡಿದ್ದರು. ಇದರ ಆಂತರಿಕ ಲೆಕ್ಕ ಪರಿಶೋಧನೆ ವರದಿ ಪ್ರಕಾರ 56.55 ಕೋಟಿ ರೂ. ಅನುದಾನ ದುರ್ಬಳಕ್ಕೆ ಮಾಡಿರುವುದು ದೃಢವಾಗಿತ್ತು. ಅದೇ ರೀತಿ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿ ಪ್ರಕಾರ 59.68 ಕೋಟಿ ರೂ. ದುರ್ಬಳಕ್ಕೆ ಆಗಿರುವುದು ಬೆಳಕಿಗೆ ಬಂದಿದೆ. ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿರುವ ವಿವಿಧ ಪ್ರಕರಣಗಳ ತನಿಖೆಗಳ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ರಚನೆಯಾಗಿರುವ ಸಮಿತಿ ಸಭೆಯಲ್ಲಿ ನೀಡಿದ ಮತ್ತು ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನ ಮೇರೆಗೆ ದೂರು ಸಲ್ಲಿಸಿರುವುದಾಗಿ ಚಂದ್ರನಾಯಕ್ ತಿಳಿಸಿದ್ದಾರೆ.

ಸಿಐಡಿಗೆ ವರ್ಗಾವಣೆ: ಈಗಾಗಲೇ ನಿಗಮದ ಹಗರಣವನ್ನು ಸಿಐಡಿ ತನಿಖೆ ನಡೆಯುತ್ತಿದೆ. ನಿಗಮದ ಕಚೇರಿ ಅಧೀಕ್ಷಕ ಸುಬ್ಬಪ್ಪ ಎಂಬುವವರನ್ನು ಬಂಧಿಸಿತ್ತು. ಈ ಪ್ರಕರಣವೂ ಸಿಐಡಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.