ನಗರದ ಸ್ವರತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ (ಸ್ವಾಯತ್ತ) 17ಪದವಿ ಪ್ರದಾನ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ 563 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಆಮೆರಿಕದ ಉದ್ಯಮಿ ಸೆಲ್ವ ಜಯರಾಮನ್ ಪದವಿ ಮತ್ತು ನಗದು ಬಹುಮಾನವನ್ನು ವಿತರಿಸಿದರು.
ಬಿಎ ವಿಭಾಗದಲ್ಲಿ 16 ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಬಿಎಸ್ಸಿ ವಿಭಾಗದಲ್ಲಿ 97, ಬಿಕಾಂ ವಿಭಾಗದಲ್ಲಿ 79, ಬಿಬಿಎ ವಿಭಾಗದಲ್ಲಿ 16 ಬಿಸಿಎ ವಿಭಾಗದಲ್ಲಿ 105 ಮತ್ತು ಎಂಎ (ಅರ್ಥಶಾಸ್ತ್ರ )ವಿಭಾಗದಲ್ಲಿ 6, ಎಂಕಾಂ ವಿಭಾಗದಲ್ಲಿ 24 ಮತ್ತು ಎಂಎಸ್ಸಿ (ರಸಾಯನಶಾಸ್ತ್ರ) ವಿಭಾಗದಲ್ಲಿ 5 ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ನಗದು ಬಹುಮಾನಗಳನ್ನು ಪಡೆದರು.
ಬಿಎ ವಿಭಾಗದಲ್ಲಿ ಕೆ.ಜೆ.ಸಂಜನಾ, ಬಿಎಸ್ಸಿ ವಿಭಾಗದಲ್ಲಿ ಡಿ.ತನುಶ್ರೀ, ಬಿಕಾಂ ವಿಭಾಗದಲ್ಲಿ ಎನ್.ಆಪೇಕ್ಷಾ, ಬಿಬಿಎ ವಿಭಾಗದಲ್ಲಿ ಎಸ್.ಜೆ.ಭಾವನಾ, ಎಂಎ (ಅರ್ಥಶಾಸ್ತ್ರ) ವಿಭಾಗದಲ್ಲಿ ಡಿ.ದಿವ್ಯಾ, ಎಂಕಾಂ ವಿಭಾಗದಲ್ಲಿ ಪಿ.ಕೆ.ಚೈತ್ರಾ ಮತ್ತು ಎಂಎಸ್ಸಿ(ರಸಾಯನಶಾಸ್ತ್ರ) ವಿಭಾಗದಲ್ಲಿ ಎಚ್.ಜಿ.ರಾಧಿಕಾ ಪ್ರಥಮ ಸ್ಥಾನ ಪಡೆದು ನಗದು ಬಹುಮಾನ ಪಡೆದರು.
ಪದವಿ ಪ್ರದಾನ ಮಾಡಿದ ಬಳಿಕ ಉದ್ಯಮಿ ಸೆಲ್ವ ಜಯರಾಮನ್ ಮಾತನಾಡಿ, 200 ವರ್ಷಗಳ ಹಿಂದೆ ಅಮೆರಿಕದ ಅಬ್ರಾಹಂ ಲಿಂಕನ್ ಶಿಕ್ಷಣದಿಂದ ಜನರ ಬದುಕು ಮತ್ತು ದೇಶದ ಆರ್ಥಿಕತೆಯನ್ನು ವೃದ್ಧಿಸಲಿದೆ ಎಂದು ಹೇಳಿದರು. ಅದೇ ಮಾದರಿಯಲ್ಲಿ ಆಮೆರಿಕ ಮುನ್ನಡೆದ ಕಾರಣ ಇಂದು ಜಗತ್ತಿನಲ್ಲಿ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿದೆ. ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ಮೂಲಕ ಸುಭದ್ರ ದೇಶ ಕಟ್ಟಲು ಸಾಧ್ಯ ಎನ್ನುವ ಉದ್ದೇಶದಿಂದ ಐಐಟಿ ಮತ್ತು ಐಐಎಂ ಸಂಸ್ಥೆೆಗಳನ್ನು ಕಟ್ಟಿದರು ಎಂದರು.
ಆದರೆ, ಪ್ರಸ್ತುತ ಪ್ರಪಂಚದ ಶೇ.30ರಷ್ಟು ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದಕ್ಕೆೆ ಕಾರಣ ಕೌಶಲ ಮತ್ತು ತಂತ್ರಜ್ಞಾನದ ಬಳಕೆಯ ಬಾರದಿರುವುದು. ಹೀಗಾಗಿ ವಿದ್ಯಾವಂತರು ಓದಿನೊಂದಿಗೆ ಕೌಶಲ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತಿ ಸಾಧಿಸಬೇಕು. ಅಬ್ದುಲ್ ಕಲಾಂ ಕನಸು ಇದ್ದರೆ ನನಸು ಮಾಡಬಹುದು. ಸೋಲೆ ಗೆಲುವಿನ ಮೆಟ್ಟಲು ಆಗಲಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಮುಗೇಶಪ್ಪ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ರೇಚಣ್ಣ, ಪರೀಕ್ಷೆೆ ಆಡಳಿತಾಧಿಕಾರಿ ಎಂ.ಎಂ.ಸ್ವಾಮಿ ಇದ್ದರು.