ನವದೆಹಲಿ: ಅನೇಕ ಸಂಸ್ಕೃತಿಗಳಲ್ಲಿ ಮದುವೆಗೆ ತನ್ನದೇಯಾದ ಮೌಲ್ಯವಿದೆ. ಇದು ಓರ್ವ ವ್ಯಕ್ತಿಯ ಜೀವಮಾನದ ಬದ್ಧತೆಯಾಗಿ ಕಂಡುಬರುತ್ತದೆ. ಮದುವೆಯಾದ ಬಳಿಕ ಕೆಲವರು ಸಂತೋಷದ ಜೀವನ ಸಾಗಿಸಿದರೆ, ಇನ್ನು ಕೆಲವರು ಮೋಸ, ಕೌಟುಂಬಿಕ ಹಿಂಸೆ, ಅವಮಾನದಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಾಗ್ಯೂ ಸಮಾಜ ಏನು ಹೇಳುತ್ತದೆ ಎಂಬ ಭಯದಿಂದ ವೈವಾಹಿಕ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಒಟ್ಟಿಗೆ ಇರುತ್ತಾರೆ. ಆದರೆ, ಅದೆಲ್ಲವನ್ನು ದಾಟಿ, ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿಚ್ಛೇದನ ತೆಗೆದುಕೊಳ್ಳಲು ಕೆಲವರು ಮುಂದಾಗುತ್ತಾರೆ. ಆದರೆ, 56 ವರ್ಷದ ನಂತರ ಈ ವಿಚ್ಛೇದನ ನಿರ್ಧಾರ ತೆಗೆದುಕೊಳ್ಳುವವರು ತೀರಾ ಕಡಿಮೆ ಎಂದು ಹೇಳಬಹುದು.
ಜೀವನದ ಕೊನೆಯ ಹಂತದಲ್ಲಿದ್ದಾಗ ವಿಚ್ಛೇದನ ಪಡೆಯುವುದರಿಂದ ಏನು ಲಾಭ ಎಂದು ಸಾಮಾನ್ಯವಾಗಿ ಯೋಚಿಸುತ್ತಾರೆ. ವಿಚ್ಛೇದನಾ ಪಡೆದರು ಮತ್ತೊಂದು ಮದುವೆಯ ಬಗ್ಗೆ ಚಿಂತಿಸುವುದೇ ಇಲ್ಲ. ಆದರೆ ಇಲ್ಲೋರ್ವ ಮಹಿಳೆ ತನ್ನ 56ನೇ ವಯಸ್ಸಿನಲ್ಲೂ ವಿಚ್ಛೇದನ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಲ್ಲದೆ, ತನಗಿಂತ 20 ವರ್ಷ ಕಿರಿಯ ವ್ಯಕ್ತಿಯೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ತನ್ನ ಪತಿ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಗೊತ್ತಾದ ಬಳಿಕ ಆತನಿಗೆ ಧೈರ್ಯದಿಂದ ಡಿವೋರ್ಸ್ ನೀಡಿ, ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ ಮತ್ತು ಅದರಲ್ಲಿ ಯಶಸ್ಸು ಸಹ ಗಳಿಸಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ, ಈ ಮಹಿಳೆ ತನ್ನ 56ನೇ ವಯಸ್ಸಿನಲ್ಲಿ ತನಗಿಂತ 20 ವರ್ಷ ಕಿರಿಯ ವ್ಯಕ್ತಿಯಲ್ಲಿ ಉತ್ತಮ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಆರಂಭದಲ್ಲಿ ಸಣ್ಣ ಭೇಟಿಯು ಸ್ನೇಹಕ್ಕೆ ತಿರುಗಿ, ಅದು ಪ್ರೀತಿಯಾಗಿ ಬದಲಾಗಿ, ಕೊನೆಗೆ ಮದುವೆ ಎಂಬ ಬಂಧನದಲ್ಲಿ ಬಂಧಿಯಾಗಿದ್ದೇ ರೋಚಕ. ಇಲ್ಲಿ ಮಹಿಳೆಗೆ ಯುವಕನೇ ಮದುವೆ ಪ್ರಸ್ತಾಪ ಮಾಡಿದ್ದು ವಿಶೇಷ. ಆತ ಒಳ್ಳೆಯವನು ಅಂತ ಗೊತ್ತಾದ ಕೂಡಲೇ ಮರು ಮಾತನಾಡದೇ ಆಕೆ ಒಪ್ಪಿಕೊಂಡಳು. ಮೂರು ವರ್ಷಗಳ ಹಿಂದೆ ಇಬ್ಬರು ವಿವಾಹವಾದರು. ಈಗ ಆಕೆಗೆ 59 ವರ್ಷ ಮತ್ತು ಆತನಿಗೆ 39 ವರ್ಷ.
ಅಂದಹಾಗೆ ನಾವು ಹೇಳುತ್ತಿರುವುದು ಗೀತಾ ಎಂಬ ಮಹಿಳೆಯ ಕತೆಯನ್ನು. 28 ವರ್ಷಗಳ ಹಿಂದೆ ತನ್ನ ಪತಿ ಮೋಸ ಮಾಡಿದ್ದಾನೆಂದು ಗೊತ್ತಾದ ಬಳಿಕ ಗೀತಾ ವಿಚ್ಛೇದನ ಪಡೆದಿದ್ದರು. ಗೀತಾ ತನ್ನ ಜೀವನದಲ್ಲಿ ಅತ್ಯಂತ ಕಷ್ಟದ ಸಮಯದಲ್ಲಿ ನಿಖಿಲ್ ಎಂಬ ಯುವಕನನ್ನು ಭೇಟಿಯಾದರು. ಗೀತಾ ಪ್ರಾಣಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ನಿಖಿಲ್ಗೂ ಕೂದ ಇದೇ ಆಸಕ್ತಿ ಇತ್ತು. ಹೀಗಾಗಿ ಇಬ್ಬರು ಬೇಗ ಕನೆಕ್ಟ್ ಆದರು. ನಿಖಿಲ್ ಜತೆ ತನ್ನ ಜೀವನ ವ್ಯಥೆಯನ್ನು ಗೀತಾ ಹೇಳಿಕೊಂಡರು. ನಂತರ ಗೀತಾ ಬೆಂಬಲಕ್ಕೆ ನಿಂತ ನಿಖಿಲ್, ಖಿನ್ನತೆಯಿಂದ ಹೊರಬರಲು ಆಕೆಗೆ ಸಹಾಯ ಮಾಡಿದನು. ಅನೇಕ ವಿಷಯಗಳಲ್ಲಿ ಇಬ್ಬರ ಆಸಕ್ತಿ ಒಂದೇ ಆಗಿದೆ ಎಂದು ಗಮನಿಸಲಾಗಿದೆ. ಕಾಲಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ಮೂರು ವರ್ಷಗಳ ನಂತರ ನಿಖಿಲ್ ಗೀತಾಗೆ ಪ್ರಪೋಸ್ ಮಾಡಿದನು. ಆಕೆಯ ಪಾಲಕರ ಬಳಿ ಹೋಗಿ ನಿಮ್ಮ ಮಗಳನ್ನು ನಾನು ಮದುವೆಯಾಗುತ್ತೇನೆಂದು ಕೇಳಿದನು. ಕೊನೆಗೆ ಆಕೆಯ ಪಾಲಕರು ಕೂಡ ಒಪ್ಪಿಗೆ ಸೂಚಿಸಿದರು. ಇಬ್ಬರು ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾದರು.
ಈಗ ಇಬ್ಬರು ಮೂರು ವರ್ಷಗಳಿಂದ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರ ಲವ್ ಸ್ಟೋರಿಯನ್ನು ಅಫಿಶಿಯಲ್ ಪೀಪಲ್ ಆಫ್ ಇಂಡಿಯಾ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋವನ್ನು 11 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 3 ಲಕ್ಷಕ್ಕೂ ಅಧಿಕ ಲೈಕ್ ಬಂದಿವೆ. 2 ಲಕ್ಷಕ್ಕೂ ಅಧಿಕ ಮಂದಿ ಶುಭ ಹಾರೈಸಿದ್ದಾರೆ. ಇವರ ವಿಶಿಷ್ಟ ಪ್ರೇಮಕಥೆಯು ಅನೇಕ ಜನರಿಗೆ ಸ್ಫೂರ್ತಿ ನೀಡಿದೆ. (ಏಜೆನ್ಸೀಸ್)