ನ್ಯೂಸ್

545 ಎಸ್‌ಐ ನೇಮಕಾತಿ ಫಲಿತಾಂಶಕ್ಕೆ ರಕ್ತ ಚಳವಳಿ

ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ನೊಂದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ನೊಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ನೇಮಕಾತಿಗೆ 2020-21ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಕ್ರಮ ನಡೆದ ಪರಿಣಾಮ ಹೈಕೋರ್ಟ್ ಆದೇಶದಂತೆ 2024ರ ಜನವರಿಯಲ್ಲಿ ಮರುಪರೀಕ್ಷೆ ಸಹ ಮುಗಿದು ಮಾರ್ಚ್‌ನಲ್ಲಿ ಅಂತಿಮ ಅಂಕಪಟ್ಟಿ ಪ್ರಕಟಿಸಲಾಗಿದೆ. ಆದರೂ ಇಲ್ಲಿಯವರೆಗೂ ರಾಜ್ಯ ಸರ್ಕಾರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿಲ್ಲ. ಇದರಿಂದ ಪಿಎಸ್‌ಐ ಹುದ್ದೆಗಳ ಆಕಾಂಕ್ಷಿಗಳು ಬೇರೆ ನೌಕರಿಗೂ ಹೋಗದೆ ದಿನ ಕಳೆಯುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಅಂಚೆ ಮೂಲಕ ರವಾನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ, ಭೇಟಿ ಕೊಟ್ಟು ಅಭ್ಯರ್ಥಿಗಳ ನೋವು ಆಲಿಸಿದರು. ಬಳಿಕ ಮಾತನಾಡಿದ ವಿಜಯೇಂದ್ರ ಅವರು, ಸರ್ಕಾರಿ ನೌಕರಿಗೆ ಸೇರಬೇಕೆಂದು ಲಕ್ಷಾಂತರ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೆ ವ್ಯಾಸಂಗ ಮಾಡಿ ನೇಮಕಾತಿಗೆ ಸಿದ್ದರಾಗುತ್ತಾರೆ. ಕೆಲವೊಂದು ವೇಳೆ ಪರೀಕ್ಷೆ ದಿನಾಂಕ ಮುಂದೂಡಿಕೆ ಮತ್ತು ತಾಂತ್ರಿಕ ಸಮಸ್ಯೆಗಳು ಎದುರಾಗಿ ವರ್ಷಾನುಗಟ್ಟಳೇ ಕಾದು ಪರೀಕ್ಷೆಗಳನ್ನು ಎದುರಿಸುತ್ತಾರೆ.

ಆದರೆ, ಲಿತಾಂಶವೇ ಪ್ರಕಟಿಸದೆ ಸರ್ಕಾರ ಕಾಲಹರಣ ಮಾಡುವ ಮೂಲಕ ಅಭ್ಯರ್ಥಿಗಳ ಜೀವನದಲ್ಲಿ ಆಟವಾಡುತ್ತಿದೆ. ಈ ಕೂಡಲೇ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಈ ಕೂಡಲೇ ಫಲಿತಾಂಶ ಪ್ರಕಟ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿವೆ.