ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಫಲಾನುಭವಿಗಳಿಗೆ ಶಾಸಕಿ ನಯನಾ ಮೋಟಮ್ಮ ಹಕ್ಕುಪತ್ರ ವಿತರಿಸಿದರು. ಹೊಸಕೆರೆ ರಮೇಶ್, ಬಿ.ಎಸ್.ಜಯರಾಂ ಇತರರಿದ್ದರು. 
ನ್ಯೂಸ್

54 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಮೂಡಿಗೆರೆ: ಹಲವು ವರ್ಷದ ಹಿಂದೆ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ಹಕ್ಕುಪತ್ರ ಪಡೆದವರ ಮನೆ ಸಕ್ರಮಗೊಂಡಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ 54 ಫಲಾನುಭವಿಗಳಿಗೆ 94 ಸಿಯಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿ, ಹಕ್ಕುಪತ್ರ ಪಡೆದ ಫಲಾನುಭವಿಗಳು ಆಯಾ ಗ್ರಾಪಂನಲ್ಲಿ ಕಡ್ಡಾಯವಾಗಿ ಇ-ಖಾತೆ ಮಾಡಿಸಿಕೊಳ್ಳಬೇಕು.ಅರ್ಜಿಗಳನ್ನು ಸರ್ಕಾರಿ ನೌಕರರು ತ್ವರಿತವಾಗಿ ವಿಲೇವಾರಿ ಮಾಡಬೇಕು. ನಾನು ಶಾಸಕಿಯಾದ ಬಳಿಕ ತಾಲೂಕಿನ ಬಹುತೇಕ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೇಳಿದರು.

ಕೆಲವು ತಾಂತ್ರಿಕ ಅಡಚಣೆಯಿಂದ ಅನೇಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿರಲಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದ 54 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಂತಾಗಿದೆ. ಕಳೆದ 25 ವರ್ಷದಿಂದ ನಿರಾಶ್ರಿತರಾಗಿದ್ದ ಕುಂದೂರು, ಸಾರಗೋಡು, ಬೈರಿಗದ್ದೆ ಗ್ರಾಮಸ್ಥರಿಗೆ ಬದಲಿ ಜಾಗ ನೀಡಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ರಾಜಶೇಖರ ಮೂರ್ತಿ ಮಾತನಾಡಿದರು. ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ತಾಲೂಕು ಕೆಡಿಪಿ ಸದಸ್ಯ ಸುರೇಂದ್ರ, ಮಾಜಿ ತಾಪಂ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ, ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಮುಖಂಡರಾದ ಶಿವರಾಜ್, ಶ್ರೀನಾಥ್ ಇತರರಿದ್ದರು.