ನ್ಯೂಸ್

530 ಕುಟುಂಬಗಳಿಗೆ ಮನೆ ನಿರ್ಮಾಣ

ಹನಗೋಡು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ 28 ಹಾಡಿಗಳ 530 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಬಾಕಿ ಉಳಿದವರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಮಂಜೂರು ಮಾಡಲಾಗುವುದೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ನಾಲ್ಕನೇ ಬ್ಲಾಕ್‌ನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಪ್ರತಿ ಮನೆಗೆ 3.75 ಲಕ್ಷ ರೂ. ನೀಡುತ್ತಿದ್ದು, ರವಿಶಂಕರ್ ಗುರೂಜಿ ಅವರ ಹಾರ್ಟ್ ಆಫ್ ಲಿವಿಂಗ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಆದಿವಾಸಿಗಳ ಋಣ ನನ್ನ ಮೇಲಿದೆ: ತಾಲೂಕಿನ ಆದಿವಾಸಿಗಳು ಚುನಾವಣೆ ಸಂದರ್ಭದಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ನಿಮ್ಮ ಶ್ರೇಯೋಭಿವೃದ್ಧಿಗೆ ಸದಾ ಸಿದ್ಧನಿದ್ದು ನಿಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಸಾಮಾಜಿಕವಾಗಿ ಸಬಲಗೊಳಿಸುವುದರೊಂದಿಗೆ ಹಾಡಿಗಳಲ್ಲಿ ಮೂಲ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ಅಧಿಕಾರಿಗಳು ಅಥವಾ ನನ್ನೊಂದಿಗೆ ಹಂಚಿಕೊಳ್ಳಿ. ಖುದ್ದಾಗಿ ನಿಂತು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮೊದಲಿಗೆ ನಾಗಾಪುರದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳು ಒಪ್ಪಿಗೆ ಆದಲ್ಲಿ ಮಾತ್ರ ಎಲ್ಲ ಮನೆಗಳನ್ನು ಕಂಪನಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತದೆ. ಯೋಜನೆಯಡಿ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಗಿರಿಜನರು ತಾವೇ ಮುಂದೆ ನಿಂತು ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ ಎಂದರು.

ಮೊದಲ ಹಂತದಲ್ಲಿ 532 ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದ್ದು, ಹೆಚ್ಚಿನ ಫಲಾನುಭವಿಗಳಿದ್ದಲ್ಲಿ ಅವರಿಗೂ ಮನೆ ನಿರ್ಮಿಸಿಕೊಡಲು ಇಲಾಖೆ ಬದ್ಧವಾಗಿದೆ. ಇದೆಲ್ಲವೂ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾಗಿದ್ದ ಮನೆಗಳಾಗಿದ್ದು, 6 ತಿಂಗಳಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಲಿವೆ. ಗಿರಿಜನರು ಕೊಡಗಿಗೆ ಕೂಲಿ ಕೆಲಸಕ್ಕೆ ಹೋಗುವ ಬದಲು ಕಟ್ಟಡ ನಿರ್ಮಾಣಕ್ಕೆ ಮುಂದಾದಲ್ಲಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಕೂಲಿ ನಿಗದಿಗೊಳಿಸಲಾಗುವುದು. ಈ ಬಗ್ಗೆ ಹಾಡಿಯ ಮುಖಂಡರು ಚರ್ಚಿಸಿ ಒಪ್ಪಂದ ಮಾಡಿಕೊಂಡಲ್ಲಿ ಮನೆ ಬಳಿಯೇ ಕೆಲಸವೂ ಸಿಗಲಿದೆ ಎಂದರು.
ರಸ್ತೆ ನಿರ್ಮಿಸಿಲ್ಲ, ಹಾಳಾಗಿದೆ, ಎಂಬುದು ತರವಲ್ಲ. ಕಳೆದ ಮೂರು ವರ್ಷಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಜನಜೀವನವೇ ದುಸ್ತರವಾಗಿದ್ದು, ರಸ್ತೆಗಳೂ ಹಾಳಾಗಿವೆ. ಆದ್ಯತೆ ಮೇರೆಗೆ ರಸ್ತೆ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸೆಸ್ಕ್‌ಗೆ 54 ಲಕ್ಷ ರೂ. ಪಾವತಿ: ಹುಣಸೂರು ತಾಲೂಕಿನ 28 ಹಾಡಿಗಳ ನಿವಾಸಿಗಳ ಮನೆಗಳ ಬಾಕಿ ಇದ್ದ ಸುಮಾರು 54 ಲಕ್ಷ ರೂ. ವಿದ್ಯುತ್ ಬಿಲ್ಲನ್ನು ಸರ್ಕಾರದಿಂದ ಮಂಜೂರಾಗಿದ್ದು, ಸೆಸ್ಕ್‌ಗೆ ಇದೇ ವೇಳೆ ಹಸ್ತಾಂತರಿಸಲಾಗುತ್ತಿದೆ. ಇದೀಗ ಸರ್ಕಾರ ಎಸ್.ಸಿ., ಎಸ್.ಟಿ. ಕುಟುಂಬಗಳಿಗಾಗಿ 75 ಯುನಿಟ್‌ವರೆಗೆ ವಿದ್ಯುತ್ ಉಚಿತವಾಗಿ ಕಲ್ಪಿಸಿದೆ. ಹೆಚ್ಚಿನ ಬಿಲ್ ಬಂದಲ್ಲಿ ನಿಗದಿತ ವೇಳೆಯಲ್ಲಿ ಬಿಲ್ ಪಾವತಿಸಬೇಕೆಂದು ಮನವಿ ಮಾಡಿದರು.

ತಾಪಂ ಇಒ ಬಿ.ಕೆ.ಮನು, ಎಸ್‌ಟಿ ವರ್ಗಗಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪ್ರಭಾ ಅರಸ್, ತಾಲೂಕು ಅಭಿವೃದ್ಧಿ ಅಧಿಕಾರಿ ಬಸವರಾಜು, ಗುರುಪುರ ಗ್ರಾಪಂ ಅಧ್ಯಕ್ಷೆ ರಾಧಾ ನಾಗನಾಯಕ, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ಪ್ರಶಾಂತ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಆದಿವಾಸಿ ಮುಖಂಡರಾದ ಜೆ.ಟಿ.ರಾಜಪ್ಪ, ಚಂದ್ರು, ಶಿವಣ್ಣ, ವಸಂತಾ, ಬೀರೇಗೌಡ, ಕಸ್ತೂರಿಗೌಡ, ಎಚ್.ವಿ.ಗಣೇಶ್, ಬಸವಣ್ಣ, ನಾಗೇಶ್, ಕಲ್ಕುಣಿಕೆ ರಾಘು, ಎಚ್.ಎಸ್.ಕುಮಾರ್ ಸೇರಿದಂತೆ ಅನೇಕರಿದ್ದರು.