ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಷಿಪ್: ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕ ತಂಡ ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಮುಕ್ತಾಯಗೊಂಡ 52ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ (Junior National Aquatics Championship) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಕರ್ನಾಟಕ ತಂಡ 40 ಚಿನ್ನ, 22 ಬೆಳ್ಳಿ, 18 ಕಂಚಿನ ಸಹಿತ ಒಟ್ಟು 80 ಪದಕಗಳನ್ನು ಗೆದ್ದು 624 ಅಂಕ ಕಲೆಹಾಕುವ ಮೂಲಕ ಈ ಸಾಧನೆ ಮಾಡಿತು. ಜತೆಗೆ ಬಾಲಕರ ಎ1, ಬಿ1 ವಿಭಾಗಗಳಲ್ಲಿ ಮತ್ತು ಬಾಲಕಿಯರ ಎ1 ವಿಭಾಗದಲ್ಲೂ ರಾಜ್ಯ ತಂಡ ಟೀಮ್ ಚಾಂಪಿಯನ್ಷಿಪ್ ಜಯಿಸಿತು. ಕೂಟದಲ್ಲಿ 5 ಚಿನ್ನದ ಪದಕ ಗೆದ್ದ ರಾಜ್ಯದ ಶರಣ್ ಎಸ್. ಬಾಲಕರ ಬಿ1 ವಿಭಾಗದಲ್ಲಿ ಮತ್ತು 4 ಚಿನ್ನ ಗೆದ್ದ ಶ್ರೀ ಚರಣಿ ತಮು ಬಾಲಕಿಯರ ಎ1 ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಒಲಿಸಿಕೊಂಡರು.
ಕೊನೇ ದಿನ ಮತ್ತೆ 6 ಚಿನ್ನ: ಕರ್ನಾಟಕದ ಈಜುಪಟುಗಳು ಕೂಟದ ಆರನೇ ಹಾಗೂ ಕೊನೇ ದಿನ ಮತ್ತೆ 6 ಚಿನ್ನ, 2 ಬೆಳ್ಳಿ, 4 ಕಂಚಿನ ಸಹಿತ 12 ಪದಕಗಳಿಗೆ ಕೊರಳೊಡ್ಡಿದರು. ಶರಣ್ ಎಸ್. ಬಾಲಕರ 800 ಮೀ. ಫ್ರೀಸ್ಟೈಲ್ ಬಿ1 ವಿಭಾಗ ಹಾಗೂ 100 ಮೀ. ಫ್ರೀಸ್ಟೈಲ್ ಬಿ1 ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರೆ, ಶ್ರೀಚರಣಿ ತಮು ಬಾಲಕಿಯರ 400 ಮೀ. ಫ್ರೀಸ್ಟೈಲ್ ಎ1 ವಿಭಾಗ, ವೇದಾಂತ ವೆಂಕಟ ಮಧಿರ ಬಾಲಕರ 200 ಮೀ. ಬ್ಯಾಕ್ಸ್ಟ್ರೊಕ್ ಎ1 ವಿಭಾಗ, ಸಮರ್ಥ್ ಗೌಡ ಬಾಲಕರ 200 ಮೀ. ಬ್ಯಾಕ್ಸ್ಟ್ರೊಕ್ ಬಿ1 ವಿಭಾಗ ಮತ್ತು ನೈಷಾ ಬಾಲಕಿಯರ 200 ಮೀ. ಬ್ಯಾಕ್ಸ್ಟ್ರೊಕ್ ಬಿ1 ವಿಭಾಗದಲ್ಲಿ ಸ್ವರ್ಣ ಜಯಿಸಿದರು.
ಬಾಲಕಿಯರ 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ರಾಜ್ಯ ತಂಡಕ್ಕೆ ರಜತ ಒಲಿಯಿತು. ಬಾಲಕಿಯರ 200 ಮೀ. ಬ್ಯಾಕ್ಸ್ಟ್ರೊಕ್ ಎ1 ವಿಭಾಗದಲ್ಲಿ ಪ್ರಿಯಾಂಶಿ ಮಿಶ್ರಾ ಬೆಳ್ಳಿ ಮತ್ತು ಮೀನಾ ಮೆನನ್ ಕಂಚು ಜಯಿಸಿದರು. ಮೀನಾ 400 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದರು. ವಿಹಾನ್ ಶಾಶ್ವತ್ ಚತುರ್ವೇದಿ (800 ಮೀ. ಫ್ರೀಸ್ಟೈಲ್) ಮತ್ತು ಮೋನಿಷ್ ಪಿ.ವಿ. (100 ಮೀ. ಫ್ರೀಸ್ಟೈಲ್) ಕೂಡ ಕಂಚು ಗೆದ್ದುಕೊಂಡರು.