ನವೆಂಬರ್ 21 ರಿಂದ ಡಿಸೆಂಬರ್ 15ರವರೆಗೆ ಭಾರತದಲ್ಲಿ ಮದುವೆ ಸೀಸನ್ ಅಬ್ಬರ .
25 ದಿನಗಳ ಕಾಲ..52 ಲಕ್ಷ ಮದುವೆ 7.5 ಲಕ್ಷ ಕೋಟಿ ರೂಪಾಯಿ ವಹಿವಾಟು ನಿರೀಕ್ಷೆ.
CAIT ನಡೆಸಿದ ಸಂಶೋಧನೆ ಮೂಲಕ 25 ದಿನ ಖರ್ಚು ವೆಚ್ಚದ ಬಗ್ಗೆ ಮಾಹಿತಿ ರಿವೀಲ್.
wedding season business India: ಭಾರತದಲ್ಲಿ ಈಗಾಗಲೇ ಮದುವೆ ಸೀಸನ್ ಆರಂಭವಾಗಿದೆ. ದೀಪಾವಳಿ ನಂತರ ಹಲವರು ಹಲವಾರು ಮದುವೆ ಆಮಂತ್ರಣಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಈ ಮಧ್ಯೆ ನವೆಂಬರ್ 21 ರಿಂದ ಡಿಸೆಂಬರ್ 15ರವರೆಗೆ, ಅಂದರೆ 25 ದಿನಗಳ ಕಾಲ ಮದುವೆ ಸೀಸನ್ ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ದೇಶಾದ್ಯಂತ 52 ಲಕ್ಷ ಮದುವೆಗಳು ವಿಜೃಂಭಣೆಯಿಂದ ನಡೆಯಲಿವೆ. ಈ ಮದುವೆ ಸೀಸನ್‌ನಲ್ಲಿ 7.5 ಲಕ್ಷ ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ತಿಳಿಸಿದೆ.
ದೆಹಲಿ ಎನ್ಸಿಆರ್ ಒಂದರಲ್ಲೇ ಸುಮಾರು 5 ಲಕ್ಷ ಮದುವೆಗಳು ಮತ್ತು 2.5 ಲಕ್ಷ ಕೋಟಿ ವಹಿವಾಟು ನಡೆಯಲಿದೆ ಎನ್ನಲಾಗುತ್ತಿದೆ. 25 ದಿನದಲ್ಲಿ ಆತಿಥ್ಯ, ಸಾರಿಗೆ ವ್ಯವಸ್ಥೆ, ಚಿನ್ನಾಭರಣ, ಬಟ್ಟೆ, ಆಹಾರ, ಉತ್ಪಾದನೆ ಸೇರಿದಂತೆ ಇತರ ವಲಯದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
CAIT ಸಂಶೋಧನಾ ವಿಭಾಗವಾದ CAIT ರಿಸರ್ಚ್ ಆಂಡ್ ಟ್ರೇಡ್ ಡೆವಲಪ್ಮೆಂಟ್ ಸೊಸೈಟಿ 300ಕ್ಕೂ ಹೆಚ್ಚು ವ್ಯಾಪಾರ ಮುಖಂಡರು ಮತ್ತು 550 ವ್ಯಾಪಾರ ಸಂಘಗಳೊಂದಿಗೆ ಸಮಾಲೋಚನೆ ನಡೆಸಿ ಈ ಖರ್ಚು- ವೆಚ್ಚದ ಬಗ್ಗೆ ಅಂದಾಜಿಸಿದೆ.
CAIT ರಿಸರ್ಚ್ ಆಂಡ್ ಟ್ರೇಡ್ ಡೆವಲಪ್ಮೆಂಟ್ ಸೊಸೈಟಿ ಪ್ರಕಾರ ಶೇ.54ರಷ್ಟು ಅಂದರೆ, ಸುಮಾರು 4.05 ಲಕ್ಷ ಕೋಟಿ ಮೊತ್ತವು ಸರಕು ಮತ್ತು ಚಿಲ್ಲರೆ ಮೂಲಕ ಬರುವ ನಿರೀಕ್ಷೆಯಿದೆ. ಶೇ. 46ರಷ್ಟು ಅಂದರೆ 3.45 ಲಕ್ಷ ಕೋಟಿ ಸೇವೆಗಳಿಂದ ಕೊಡುಗೆ ನೀಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಆಭರಣಗಳು 1.2 ಲಕ್ಷ ಕೋಟಿ ರೂ.
ಬಟ್ಟೆ ಮತ್ತು ಗಾರ್ಮೆಂಟ್ಸ್‌ನಿಂದ 90,000 ಕೋಟಿ ರೂ. ವಹಿವಾಟು.
ಉಡುಗೊರೆಗಳು ಮತ್ತು ಮದುವೆ ಸಾಮಗ್ರಿಗಳು, ದಿನಸಿ ಮತ್ತು ಆಹಾರ ಪೂರೈಕೆಗಳಿಂದ ತಲಾ 37,500 ಕೋಟಿ ರೂ. ಎನ್ನುವ ಅಂದಾಜು.
ಎಲೆಕ್ಟ್ರಾನಿಕ್ಸ್, ಡ್ರೈ ಫ್ರೂಟ್ಸ್ ಮತ್ತು ಸಿಹಿತಿಂಡಿಗಳು, ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳು ತಲಾ 30,000 ಕೋಟಿ ರೂ. ಕೊಡುಗೆ ನೀಡುವ ನಿರೀಕ್ಷೆಯಿದೆ.
ಸೇವೆಗಳ ಪೈಕಿ ಕ್ಯಾಟರಿಂಗ್‌ನಿಂದ 75,000 ಕೋಟಿ ರೂ.
ಮದುವೆ ಸ್ಥಳಗಳು, ಬ್ಯಾಂಕ್ವೆಟ್ ಹಾಲ್‌ಗಳು ಮತ್ತು ಹೋಟೆಲ್‌ಗಳಿಂದ 60,000 ಕೋಟಿ ನಿರೀಕ್ಷೆ.
ಇವೆಂಟ್ ಮ್ಯಾನೇಜ್‌ಮೆಂಟ್ ಮತ್ತು ವೆಡ್ಡಿಂಗ್ ಪ್ಲಾನಿಂಗ್ ಹಾಗೂ ಹೂವಿನ ಅಲಂಕಾರ ಮತ್ತು ವೆಡ್ಡಿಂಗ್ ಡೆಕೋರ್‌ನಿಂದ ತಲಾ 37,500 ಕೋಟಿ ರೂ. ಬರುವ ನಿರೀಕ್ಷೆ ಇದೆ.
ಪ್ರಯಾಣ ಮತ್ತು ಸಾರಿಗೆ, ಸಂಗೀತ ಮತ್ತು ಮನರಂಜನಾ ಸೇವೆಗಳಿಂದ ತಲಾ 30,000 ಕೋಟಿ ರೂ. ನಿರೀಕ್ಷೆ.
ಛಾಯಾಗ್ರಹಣ, ವಿಡಿಯೋಗ್ರಫಿ ಮತ್ತು ಸೌಂದರ್ಯ ಸೇವೆಗಳಿಂದ ತಲಾ 22,500 ಕೋಟಿ ರೂ. ಕೊಡುಗೆ ದೊರೆಯುವ ನಿರೀಕ್ಷೆ ಇದೆ.
ಕ್ಯಾಟರಿಂಗ್, ಡೆಕೋರೇಷನ್, ಛಾಯಾಗ್ರಹಣ, ಆತಿಥ್ಯ, ಸಾರಿಗೆ, ಇವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಮೇಕಪ್ನಂತಹ ಬ್ಯೂಟಿ ಕೇರ್ ಕೆಲಸಗಳು ಸುಮಾರು 1.25 ಕೋಟಿ ತಾತ್ಕಾಲಿಕ ಮತ್ತು ಅರೆಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು CAIT ಹೇಳಿದೆ.
ಸರಳ ಸಮಾರಂಭಗಳಿಗೆ ಸುಮಾರು 4–5 ಲಕ್ಷ ರೂ.ದಿಂದ ಪ್ರೀಮಿಯಂ ಮದುವೆಗಳಿಗೆ 4–5 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚವಾಗುತ್ತಿದ್ದು, ಈ ಖರ್ಚು ವಿವಿಧ ಗಾತ್ರದ ಉದ್ಯಮಗಳಿಗೆ ಪ್ರಯೋಜನ ನೀಡುತ್ತಿದೆ ಎಂದು CAIT ತಿಳಿಸಿದೆ.
ಸಂಘಟನೆಯ ಅಂದಾಜಿನ ಪ್ರಕಾರ, ಮದುವೆ ವ್ಯವಹಾರವು 2022ರಲ್ಲಿ 32 ಲಕ್ಷ ಮದುವೆಗಳಲ್ಲಿ 3.75 ಲಕ್ಷ ಕೋಟಿ ರೂ., 2023ರಲ್ಲಿ 38 ಲಕ್ಷ ಮದುವೆಗಳಲ್ಲಿ 4.74 ಲಕ್ಷ ಕೋಟಿ ರೂ., 2024ರಲ್ಲಿ 48 ಲಕ್ಷ ಮದುವೆಗಳಲ್ಲಿ 5.90 ಲಕ್ಷ ಕೋಟಿ ರೂ. ಮತ್ತು 2025ರಲ್ಲಿ 46 ಲಕ್ಷ ಮದುವೆಗಳಲ್ಲಿ 6.50 ಲಕ್ಷ ಕೋಟಿ ರೂ. ಆಗಿತ್ತು.
ದೇಶೀಯ ಉತ್ಪಾದನೆ ಮತ್ತು ಸಣ್ಣ ಉದ್ಯಮಗಳಿಗೆ ಮದುವೆ ಸೀಸನ್ ಬೆಂಬಲ ನೀಡಬಹುದಾಗಿದ್ದು, ಗ್ರಾಹಕರು ಭಾರತೀಯ ನಿರ್ಮಿತ ಉತ್ಪನ್ನಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ಆದ್ಯತೆ ನೀಡುವಂತೆ ವ್ಯಾಪಾರಿ ಸಂಘಟನೆ ಮನವಿ ಮಾಡಿದೆ, (ಏಜೆನ್ಸೀಸ್).