ನ್ಯೂಸ್

51 ಕಿ.ಮೀ.ವರೆಗೆ ಮಾನವ ಸರಪಳಿ ಕಾರ್ಯಕ್ರಮ:ಡಿಸಿ ಕೆ.ಎ.ದಯಾನಂದ ಹೇಳಿಕೆ

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಿಮಿತ್ತ ಭಾನುವಾರ (ಸೆ.15) ಹೊಸಕೋಟೆ ಟೋಲ್​ ರಸ್ತೆಯಿಂದ ರಾಮನಗರ ಸಿಟಿವರೆಗೆ ಅಂದಾಜು 51 ಕಿ.ಮೀ.ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ್​ನಿಂದ ಚಾಮರಾಜನಗರವರೆಗೆ ಅಂದರೆ 2,800 ಕಿ.ಮೀ. ಮಾನವ ಸರಪಳಿ ರಚಿಸುವ ಮೂಲಕ ಪ್ರಜಾಪ್ರಭುತ್ವ ದಿನ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ಟೋಲ್​ ರಸ್ತೆಯಿಂದ ಆರಂಭವಾಗುವ ಮಾನವ ಸರಪಳಿ ಕಾರ್ಯಕ್ರಮವು,ಕೆ.ಆರ್​.ಪುರಂ, ಇಂದಿರಾನಗರ, ಎಂ.ಜಿ.ರಸ್ತೆ, ವಿಧಾನಸೌಧ, ಮೆಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಕುಂಬಳಗೊಡು, ಹೆಜ್ಜಾಲ ಬಸ್​ ನಿಲ್ದಾಣ, ರಾಮನಗರ ಜಿಲ್ಲೆಯ ಪ್ರವೇಶವರೆಗೂ ನಡೆಯಲಿದೆ ಎಂದರು.

ಪ್ರಜಾಪ್ರಭುತ್ವದ ತತ್ವಗಳನ್ನು ಸಾರ್ವಜನಿಕರಿಗೆ ತಿಳಿಸುವುದು, ಮಾನವ ಹಕ್ಕುಗಳ ರಣೆ, ಅಭಿವೃದ್ಧಿ, ಶಾಂತಿ, ಸ್ಥಿರತೆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಅಂದಾಜು 50 ಸಾವಿರ ವಿದ್ಯಾರ್ಥಿಗಳು, ಸಂಟನೆಗಳು,ಸಾರ್ವಜನಿಕರು ಭಾಗಿಯಾಗಲಿದ್ದಾರೆ. ನೂರು ಮೀಟರ್​ಗೆ ಓರ್ವ ಮಾನಿಟರ್​, 2 ಕಿ.ಮೀ.ಗೆ ಕ್ಯಾಪ್ಟನ್​ ಮತ್ತು 5 ಕಿ. ಮೀ.ಗೆ ಓರ್ವ ಕಮಾಂಡೋ ನೇಮಿಸಲಾಗಿದೆ. ಕಾರ್ಯಕ್ರಮದ ನೆನಪಿಗೆ ಮಾನವ ಸರಪಳಿ ಸಾಗುವ ಮಾರ್ಗದಲ್ಲಿ 10 ಲ ಗಿಡ ನೆಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.