ನ್ಯೂಸ್

Karnataka Budget: ರಾಜ್ಯ ಬಜೆಟ್​ನಲ್ಲಿ 50 ಸಾವಿರ ರೈತರಿಗೆ ಸಹಾಯಧನ; 5000 ಕಿರು ಸಂಸ್ಕರಣಾ ಘಟಕ ಸ್ಥಾಪನೆ

Karnataka Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್​ (2025-26) ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಮೂಲಕ ರಾಜಕೀಯ ಇತಿಹಾಸದಲ್ಲಿ 16ನೇ ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆದಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ಶೇ.10ರಷ್ಟು ವೃದ್ಧಿಯೊಂದಿಗೆ 4.08 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆಯಿದೆ.

ಕುವೆಂಪು ಕವಿತೆ ಮೂಲಕ ಇಂದಿನ ಬಜೆಟ್ ಆರಂಭಿಸಿದ ಸಿಎಂ, ಮುಖ್ಯಮಂತ್ರಿ ಮೂಲ ಸೌಕರ್ಯ ಯೋಜನೆಯ ಮೂಲಕ ಸಿಎಂ ವಿವೇಚನಾ ಕೋಟ, ಅದರಡಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ‌ ರಸ್ತೆ, ಸಣ್ಣ ನೀರಾವರಿಗೆ 8 ಸಾವಿರ ಕೋಟಿ ರೂ. ಘೋಷಿಸಿದರು. ಇನ್ನು ರಾಜ್ಯದ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಮೀಸಲಿಡಲಾಗಿದೆ. 1.81 ಲಕ್ಷ ರೈತರಿಗೆ ಹನಿ, ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ. ಸಹಾಯಧನ ಮತ್ತು ತೊಗರಿ ಉತ್ಪಾದನೆ ಉತ್ತೇಜನಕ್ಕೆ 88 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದರು.

ಐದು ಸಾವಿರ ಕಿರು ಸಂಸ್ಕರಣಾ ಘಟಕ ಸ್ಥಾಪನೆ, 12 ಸಾವಿರ ಕೃಷಿ ಹೊಂಡ ನಿರ್ಮಾಣ ಗುರಿ ಮತ್ತು 20 ಕೋಟಿ ವೆಚ್ಚದಲ್ಲಿ ಸಾವಯವ ಸಿರಿಧಾನ್ಯ ಹಬ್ ಸ್ಥಾಪಿಸುವುದಾಗಿ ಘೋಷಿಸಿದರು. ಇನ್ನು ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಪ್ರಾರಂಭ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ 2ಕ್ಕೆ 95 ಕೋಟಿ ರೂ. ಮೀಸಲು, ರಾಜ್ಯ 20 ಜಿಐ ಟ್ಯಾಗ್ ಹೊಂದಿರುವ ದೇಸಿ ತಳಿಗಳ ಬೀಜ ಬ್ಯಾಂಕ್ ಹಾಗೂ ಅಡಕೆ ಎಲೆ‌ಚುಕ್ಕೆ ರೋಗದ ಬಾಧೆ ನಿಯಂತ್ರಿಸಲು 62 ಕೋಟಿ ರೂ. ನೀಡುವುದಾಗಿ ತಮ್ಮ ಬಜೆಟ್​ನಲ್ಲಿ ಘೋಷಿಸಿದ್ದಾರೆ.