Tirupati Stampede: ವಿಶ್ವಪ್ರಸಿದ್ಧ ತಿರುಪತಿಯಲ್ಲಿ ನಿನ್ನೆ (ಜನವರಿ 08) ಭಾರಿ ದುರಂತ ಸಂಭವಿಸಿದೆ. ವೈಕುಂಠಂ ದ್ವಾರ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯದ ಮುಂದೆ ಹಾಜರಿದ್ದ ಭಕ್ತಾಧಿಗಳು, ಟೋಕನ್ ಕೇಂದ್ರಗಳಲ್ಲಿ ಉಂಟಾದ ಕಾಲ್ತುಳಿತದಿಂದ ತತ್ತರಿಸಿದ್ದಾರೆ. ಕಾಲ್ತುಳಿತದಲ್ಲಿ ಆರು ಭಕ್ತರು (Devotees) ಮೃತಪಟ್ಟಿದ್ದು, 48ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಈ ತರಕಾರಿಗಳನ್ನು ಸಿಪ್ಪೆ ಸುಲಿಯದೆ ತಿನ್ನಬೇಕು! ಆದ್ರೆ ನೀವು ಇಷ್ಟ ದಿನ ಮಾಡಿದ್ದು ತಪ್ಪು… Healthy Vegetables
ವೈಕುಂಠ ಏಕಾದಶಿಯ ಸಂದರ್ಭದಲ್ಲಿ ತಿರುಮಲ ಶ್ರೀವರಿ ವೈಕುಂಠ ದ್ವಾರದ ದರ್ಶನಕ್ಕಾಗಿ ತಿರುಪತಿಯ ಎಂಟು ಕೇಂದ್ರಗಳಲ್ಲಿ ಸ್ಲಾಟ್ ಮಾಡಿದ ಸರ್ವ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಈ ತಿಂಗಳ 10, 11 ಮತ್ತು 12 ರಂದು ಒಟ್ಟು 1.20 ಲಕ್ಷ ಟೋಕನ್‌ಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದಾಗ್ಯೂ ದಿನಾಂಕ 9 (ಗುರುವಾರ) ರಂದು ಬೆಳಗ್ಗೆ 5 ಗಂಟೆಗೆ ಟೋಕನ್ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂಬ ವಿಚಾರ ತಿಳಿದ ಬೆನ್ನಲ್ಲೇ ಬುಧವಾರ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಟೋಕನ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲಿಗೆ ಕಾರಣರಾದರು.
ಮೃತರ ಪೈಕಿ ಐದು ಮಹಿಳೆಯರು ಮತ್ತು ಓರ್ವ ಪುರುಷ ಎಂದು ವರದಿಯಾಗಿದೆ. ಕಾಲ್ತುಳಿತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು, "ದೇವಸ್ತಾನದ ಬಳಿ ಜಮಾಯಿಸಿದ್ದ ಭಕ್ತರು ಹೊರಗಿರುವಾಗ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದ್ವಾರವನ್ನು ತೆರೆದರು. ಈ ವೇಳೆ ಭಕ್ತರು ಏಕಾಏಕಿ ನುಗ್ಗಿದ್ದೇ ಕಾಲ್ತುಳಿತಕ್ಕೆ ಕಾರಣವಾಯಿತು. ಕಾಲ್ತುಳಿತ ಸಂಭವಿಸಲು ಅತಿಯಾದ ಜನದಟ್ಟಣೆ. ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ" ಎಂದರು.
ಇನ್ನು ಘಟನೆ ಬಗ್ಗೆ ತಿರುಪತಿ ಪುರಸಭೆ ಆಯುಕ್ತರಾದ ಮೌರ್ಯ ಪ್ರತಿಕ್ರಿಯಿಸಿ, "ಎಂಜಿಎಂ ಶಾಲೆ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಕೌಂಟರ್‌ಗಳಲ್ಲಿಯೂ ಪರಿಸ್ಥಿತಿ ಶಾಂತಿಯುತವಾಗಿತ್ತು. ಅಲ್ಲಿನ ದ್ವಾರ ತೆರೆಯುತ್ತಿದ್ದಂತೆ ಒಂದೇ ಬಾರಿಗೆ ಸುಮಾರು 5,000 ಭಕ್ತಾಧಿಗಳು ಏಕಾಏಕಿ ನುಗ್ಗಿದ್ದೇ ಕಾಲ್ತುಳಿತ ಉಂಟಾಗಲು ಕಾರಣವಾಯಿತು" ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಳಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ, "ವೈಕುಂಠ ಏಕಾದಶಿ ದರ್ಶನಕ್ಕಾಗಿ ಟೋಕನ್ ವಿತರಿಸಲು ನಾವು 91 ಕೌಂಟರ್‌ಗಳನ್ನು ತೆರೆದಿದ್ದೇವೆ. ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ,(ಏಜೆನ್ಸೀಸ್).