ನ್ಯೂಸ್

ಏರ್ ಆಂಬುಲೆನ್ಸ್ ಸೇವೆಯಲ್ಲಿ 35 ವರ್ಷ ಹಿಂದಿರುವ ಭಾರತ; 500 ಕೋಟಿಯಲ್ಲಿ ಇಡೀ ದೇಶಕ್ಕೆ ಸೇವೆ ಸಾಧ್ಯ

ಬೆಂಗಳೂರು: ಏರ್ ಆಂಬುಲೆನ್ಸ್ ಪರಿಕಲ್ಪನೆ ಭಾರತದ ಮಟ್ಟಿಗೆ ಇನ್ನೂ ನಿಲುಕದ ನಕ್ಷತ್ರ. 140 ಕೋಟಿ ಜನಸಂಖ್ಯೆಯ ಭಾರತಕ್ಕೆ ಕನಿಷ್ಠ 50 ಹೆಲಿಕಾಪ್ಟರ್‌ಗಳಾದರೂ ಬೇಕು. ಸದ್ಯಕ್ಕೆ ಒಂದು ಹೆಲಿಕಾಪ್ಟರ್ ಹಾಗೂ ಐದು ಚಾಪ್ಟರ್ ವಿಮಾನಗಳಿವೆ, ಅದೂ ಉಳ್ಳವರ ಪಾಲಿಗಷ್ಟೇ. ಇದನ್ನು ನೋಡಿದರೆ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಗೋಲ್ಡನ್ ಅವರ್‌ನ ಮಹತ್ವ ಭಾರತೀಯರಿಗೆ ಇನ್ನೂ ಮನವರಿಕೆ ಆಗಿಲ್ಲ. ಆದರೆ ವಿದೇಶಿಯರು ಈಗಾಗಲೇ ಪ್ಲಾಟಿನಂ ಮಿನಿಟ್ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದಾರೆ.

ಭಾರತದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಹಾಗೂ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ದೊರೆಯದೆ ಸಂಭವಿಸುತ್ತಿರುವ ಸಾವುಗಳ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ಒದಗಿಸುವಲ್ಲಿ ‘ಏರ್ ಆಂಬುಲೆನ್ಸ್ ’ನ ಪಾತ್ರ ಹಾಗೂ ಮಹತ್ವ ಕುರಿತು ವಿಜಯವಾಣಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಐಕ್ಯಾಟ್ ಪ್ರತಿಷ್ಠಾನದ ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್ ಭಾರತದಲ್ಲಿ ಏರ್ ಆಂಬುಲೆನ್ಸ್’ನ ಸೇವೆ ಲಭ್ಯತೆ ಮತ್ತು ಅವಶ್ಯಕತೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ದೇಶದಲ್ಲಿ ಕಾಯಿಲೆಗಳಿಂದ ಸಂಭವಿಸುವ ಸಾವು-ನೋವುಗಳಿಗಿಂತ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಲಭ್ಯವಾಗದೆ ಮರಣ ಹೊಂದುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಭಾರತದಲ್ಲಿ ಏರ್ ಆಂಬುಲೆನ್ಸ್ ಸೇವೆಯ ತುರ್ತು ಅನಿವಾರ್ಯತೆ ಇದೆ.

ಕೇಂದ್ರ, ರಾಜ್ಯಕ್ಕೆ ಪ್ರಸ್ತಾವನೆ

ಏರ್ ಆಂಬುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಐಕ್ಯಾಟ್ ಸಂಸ್ಥೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ರಾಜ್ಯಕ್ಕೆ ಎರಡರಂತೆ 50 ಹೆಲಿಕಾಪ್ಟರ್‌ಗಳಾದರೆ ದೇಶಾದ್ಯಂತ ರಸ್ತೆ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸೇವೆ ಒದಗಿಸಬಹುದಾಗಿದೆ. ಇದಕ್ಕಾಗಿ ವಾರ್ಷಿಕ ಅಂದಾಜು 500 ಕೋಟಿ ರೂ. ವೆಚ್ಚವಾಗಲಿದೆ. ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಎರಡು ಹೆಲಿಕಾಪ್ಟರ್‌ಗಳಾದರೆ ಸೇವೆ ಒದಗಿಸಬಹುದಾಗಿದೆ. ವಾರ್ಷಿಕ 30 ಕೋಟಿ ರೂ.ವೆಚ್ಚವಾಗಲಿದೆ ಎಂದು ವಿವರಿಸಿದರು.

ಈಗಾಗಲೇ ಮಧ್ಯಪ್ರದೇಶ ಸರ್ಕಾರ ಪಿಎಂಶ್ರೀ ಉಚಿತ ಏರ್ ಆಂಬುಲೆನ್ಸ್ ಯೋಜನೆಯಡಿ ಐಕ್ಯಾಟ್ ಸಹಯೋಗದಲ್ಲಿ ರಾಜ್ಯದ ಎಲ್ಲ ವರ್ಗದ ಜನರಿಗೂ ತುರ್ತು ಸಂದರ್ಭದಲ್ಲಿ ಸೇವೆ ಒದಗಿಸುತ್ತಿದೆ. ಉಳಿದಂತೆ ಕರ್ನಾಟಕ, ಒಡಿಶಾ, ಛತ್ತೀಸ್‌ಗಢ, ಮಹಾರಾಷ್ಟ್ರ, ತ್ರಿಪುರ ಸೇರಿ ಕೆಲ ರಾಜ್ಯ ಸರ್ಕಾರಗಳ ಮುಂದೆಯೂ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಡಾ.ಶಾಲಿನಿ ಹೇಳಿದರು.

ಏರ್ ಆಂಬುಲೆನ್ಸ್ ವೈಶಿಷ್ಟ್ಯತೆ

ಏರ್ ಆಂಬುಲೆನ್ಸ್ ನಲ್ಲಿ ಶಸಚಿಕಿತ್ಸಾ ಕೊಠಡಿಯಲ್ಲಿರುವಂತೆಯೇ ವೈದ್ಯಕೀಯ ಉಪಕರಣಗಳ ಕಿಟ್ ಇದ್ದು ಏಳು ಜನರಿಗೆ ಅವಕಾಶವಿದೆ. ಇದರಲ್ಲಿ ಐಸಿಯು ವ್ಯವಸ್ಥೆಯೂ ಇರಲಿದೆ. ರೋಗಿ, ಇಬ್ಬರು ಪೈಲೆಟ್‌ಗಳು, ಒಬ್ಬರು ಫ್ಲೈಯಿಂಗ್ ಇನ್‌ಟೆನ್ಸಿವಿಸ್ಟ್, ಒಬ್ಬರು ಫ್ಲೈಯಿಂಗ್ ಪ್ಯಾರಾಮೆಡಿಕಲಿಸ್ಟ್, ಇಬ್ಬರು ರೋಗಿಯ ಸಂಬಂಧಿ ಇರಲಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ.

ಏರ್ ಆಂಬುಲೆನ್ಸ್ ಕೇವಲ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಸಾಗಿಸುವುದಷ್ಟೇ ಅಲ್ಲದೆ, ಅಂಗಾಂಗ ಸಾಗಾಟ, ತೀರ್ಥಯಾತ್ರೆ, ಪ್ರವಾಸ, ಸಂಬಂಧಿಕರ ಭೇಟಿ, ಪರಸ್ಥಳಕ್ಕೆ ಹೋದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಸ್ವಸ್ಥಳಕ್ಕೆ ಸ್ಥಳಾಂತರಿಸಲು ಉಪಯೋಗವಾಗಲಿದೆ. ಇದರಿಂದ ಗಮನಾರ್ಹ ಪ್ರಮಾಣದಲ್ಲಿ ಜೀವಗಳನ್ನು ಉಳಿಸಬಹುದಾಗಿದೆ ಎಂದು ಶಾಲಿನಿ ಮಾಹಿತಿ ನೀಡಿದರು.

16 ನಿಮಿಷದಲ್ಲಿ ಸಿದ್ಧಗಂಗಾ ಶ್ರೀಗಳ ಶಿಫ್ಟ್

ಶತಾಯುಷಿ ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮಿಗಳು ಅನಾರೋಗ್ಯಕ್ಕೆ ತುತ್ತಾದಾಗ ಬೆಂಗಳೂರಿನಿಂದ 16 ನಿಮಿಷದಲ್ಲಿ ಚೆನ್ನೈ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು ಒಂದು ಮಹತ್ವದ ಘಟನೆ. 2017ರಲ್ಲಿ ಶ್ರೀಗಳಿಗೆ ಯಶಸ್ವಿ ಚಿಕಿತ್ಸೆ ದೊರೆತ ಪರಿಣಾಮ 2019ರವರೆಗೆ ಆರೋಗ್ಯವಾಗಿ ಉಳಿಯಲು ಸಾಧ್ಯವಾಗಿತ್ತು.

ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ನಿರ್ಮಿಸಿ ಲ್ಯಾಂಡ್ ಆ್ಯಂಬುಲೆನ್ಸ್ ಮೂಲಕ ಎಷ್ಟೋ ಜೀವ ಉಳಿಸಿದ ಉದಾಹರಣೆಗಳಿವೆ. ಆದರೆ ಎಲ್ಲ ಸಂದರ್ಭ ಮತ್ತು ಸ್ಥಳಗಳಲ್ಲಿ ಗ್ರೀನ್ ಕಾರಿಡಾರ್ ನಿರ್ಮಾಣ ಸಾಧ್ಯವಿಲ್ಲ. ಇದರಿಂದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಲಿದೆ ಎಂಬುದು ಶಾಲಿನಿ ಅವರ ವಿಶ್ಲೇಷಣೆ.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ

ಛತ್ತೀಸ್‌ಗಢದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕೇಂದ್ರ ಚುನಾವಣಾ ಆಯೋಗ ಎದುರಾಗಬಹುದಾದ ದಾಳಿಯಲ್ಲಿ ಗಾಯಗೊಂಡವರ ರಕ್ಷಣೆಯ ಜವಾಬ್ದಾರಿಯನ್ನು ಐಕ್ಯಾಟ್ ಸಂಸ್ಥೆಗೆ ವಹಿಸಿತ್ತು. ನಿರಂತರವಾಗಿ ನಡೆಯುತ್ತಿದ್ದ ಗ್ರೆನೈಡ್ ಹಾಗೂ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ 16 ಸಿಆರ್‌ಪಿಎ್ ಯೋಧರನ್ನು ಏರ್‌ಲ್‌ಟಿ ಮುಖಾಂತರ ಜೀವ ಉಳಿಸಿದ್ದು ಬಹುದೊಡ್ಡ ಸವಾಲು. ಈ ಯಶಸ್ವಿ ಕಾರ್ಯಾಚರಣೆಯ ನಂತರ ಚುನಾವಣಾ ಆಯೋಗ 2024ರ ಸಾರ್ವತ್ರಿಕ ಚುನಾವಣೆಯಲ್ಲೂ ಏರ್‌ಲ್‌ಟಿ ಜವಾಬ್ದಾರಿಯನ್ನು ಸಂಸ್ಥೆಗೆ ವಹಿಸಿತ್ತು.

ಏರ್ ಆಂಬುಲೆನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ 7 ವರ್ಷಗಳಲ್ಲಿ ಕೋವಿಡ್ ಸಮಯ ಬಹುದೊಡ್ಡ ಸವಾಲು ಎನ್ನುತ್ತಾರೆ ಶಾಲಿನಿ. ಗಂಟೆಗೆ ನೂರಕ್ಕೂ ಹೆಚ್ಚು ಕರೆಗಳು ಬರುತ್ತಿದ್ದವು. ಆಕ್ಸಿಜನ್ ಸಿಗದಿದ್ದಕ್ಕಾಗಿಯೂ ಏರ್ ಲ್‌ಟಿಗಾಗಿ ಮನವಿ ಮಾಡುತ್ತಿದ್ದರು. ಈ ವೇಳೆ ಸೋಂಕು ಇತರರಿಗೆ ಹರಡದಂತೆ ರೋಗಿಗಳನ್ನು ಸುರಕ್ಷಿತವಾಗಿ ಏರ್‌ಲ್‌ಟಿ ಮಾಡಲು ಜರ್ಮನಿಯಿಂದ ಅತ್ಯಾಧುನಿಕ ಐಸೋಲೇಷನ್ ಪಾಡ್ ಬಳಸಿಕೊಂಡು ಸೇವೆ ಒದಗಿಸಲಾಗಿದೆ. ಈವರೆಗೆ ನಮ್ಮ ಸಂಸ್ಥೆ ಏರ್‌ಲ್‌ಟಿ ಮಾಡುವ ಮೂಲಕ 2 ಸಾವಿರ ಜನರ ಪ್ರಾಣ ಉಳಿಸಿರುವ ತೃಪ್ತಿ ಇದೆ ಎಂದರು.

ರಾಜ್ಯ ಸರ್ಕಾರದ ಮುಂದಿರುವ ಚಿಂತನೆ

ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಏರ್ ಆಂಬುಲೆನ್ಸ್ ’ಸೇವೆ ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗಳಿಗೆ ದಾಖಲಿಸಲು ಅನುಕೂಲವಾಗುವಂತೆ ಐಕ್ಯಾಟ್ ಆರಂಭಿಸಿದ್ದ ಏರ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿತ್ತು. ಆ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಏರ್ ಆಂಬುಲೆನ್ಸ್ ಸೇವೆ ಎಂಬ ಹೆಗ್ಗಳಿಕೆ ಕೂಡ ಪಡೆದುಕೊಂಡಿತ್ತು. ನಂತರದಲ್ಲಿ ಈ ಸೇವೆ ಒದಗಿಸಲು ಸರ್ಕಾರ ಬಜೆಟ್‌ನಲ್ಲಿ ೋಷಣೆ ಮಾಡಿತ್ತು. ಆದರೆ ನಾನಾ ಕಾರಣಗಳಿಂದಾಗಿ ಯೋಜನೆ ಜಾರಿಯಾಗಲಿಲ್ಲ.

ಇದೀಗ ರಾಜ್ಯದಲ್ಲಿ ಸುಗಮ ಸಂಚಾರಕ್ಕಾಗಿ ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಂಡಿವೆ. ಇದರಿಂದ ಪ್ರಯಾಣದ ಸಮಯ ಕಡಿಮೆಯಾಗುವುದರ ಹೊರತಾಗಿ ಅಪಘಾತ ಹಾಗೂ ಸಾವು-ನೋವುಗಳ ಪ್ರಮಾಣ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಅಪಘಾತದಿಂದಾಗುವ ಸಾವು-ನೋವುಗಳನ್ನು ತಗ್ಗಿಸಲು ಹಾಗೂ ಸಕಾಲದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲು ‘ಏರ್ ಆಂಬುಲೆನ್ಸ್’ ಸಹಕಾರಿಯಾಗಲಿದೆ.