ಬೆಂಗಳೂರು: ಪೂರ್ವ ವಿಭಾಗದ ಸಂಚಾರ ಪೊಲೀಸರು ವಾಟರ್ ಟ್ಯಾಂಕರ್ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವ ಹಾಗೂ ಕರ್ಕಶ ಶಬ್ದ ಉಂಟುಮಾಡುತ್ತಿದ್ದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 50,500 ರೂ. ದಂಡ ಸಂಗ್ರಹಿಸಿದ್ದಾರೆ.
ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುತ್ತಿದ್ದ ವಾಟರ್ ಟ್ಯಾಂಕರ್ ಚಾಲಕರುಗಳ ವಿರುದ್ಧ ೫೫ ಪ್ರಕರಣಗಳು ಹಾಗೂ ಕರ್ಕಶ ಶಬ್ದ ಮಾಡುವ ವಾಟರ್ ಟ್ಯಾಂಕರ್ ಚಾಲಕರ ವಿರುದ್ಧ ೪೬ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಮಾರು ೨೫೯ ವಾಹನಗಳನ್ನು ತಪಾಸಣೆ ಮಾಡಿದ ಸಂಚಾರ ಪೊಲೀಸರು ೧೦೦ ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿಕೊಂಡು ೫೦,೫೦೦ ರೂ. ದಂಡ ಸಂಗ್ರಹಿಸಿದ್ದು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಮುಂದಿನ ದಿನಗಳಲ್ಲಿಯೂ ಸಹ ಈ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.