ನ್ಯೂಸ್

ಅಮೆರಿಕದಲ್ಲಿ ಮಾರಾಟವಾಗುತ್ತಿರುವ 50% ಐಫೋನ್ ಮೇಡ್ ಇನ್ ಇಂಡಿಯಾ

ನವದೆಹಲಿ: ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಶೇಕಡ 50ರಷ್ಟು ಐಫೋನ್​ಗಳು ಭಾರತದಲ್ಲಿ ತಯಾರಾಗಿವೆ. ಭಾರತವು ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಐಫೋನ್​ಗಳ ‘ಕಂಟ್ರಿ ಆಫ್ ಒರಿಜಿನ್’ ಆಗಲಿದೆ. ಆಪಲ್ ವಾಚ್, ಏರ್​ಪಾಡ್ಸ್​ನಂಥ ಉತ್ಪನ್ನಗಳನ್ನು ವಿಯೆಟ್ನಾಂನಲ್ಲಿ ತಯಾರಿಸಲಾಗುತ್ತಿದೆ ಎಂದು ಆಪಲ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಟಿಮ್ ಕುಕ್, 2026ರ ಹೊತ್ತಿಗೆ ಭಾರತದಲ್ಲಿ ವರ್ಷಕ್ಕೆ 6 ಕೋಟಿಗೂ ಹೆಚ್ಚು ಐಫೋನ್​ಗಳ ತಯಾರಿಕೆ ಸಾಧ್ಯವಾಗಲಿದೆ. ಭಾರತದಲ್ಲಿ ಇನ್ನಷ್ಟು ತಯಾರಿಕಾ ಕಂಪನಿಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.

ಚೀನಾ ಅವಲಂಬನೆ ತಪ್ಪಿಸಲು ಕ್ರಮ: ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ ತೀವ್ರಗೊಂಡಿರುವುದರಿಂದ ಕಂಪನಿ ಭಾರತದಲ್ಲಿ ಹೆಚ್ಚಿನ ಐಫೋನ್​ಗಳನ್ನು ಉತ್ಪಾದಿಸಲು ಮುಂದಾಗಿದೆ. ಪರಸ್ಪರ ತೆರಿಗೆ ನೀತಿ ಜಾರಿಗೆ ಬಂದ ಬಳಿಕ ಐಫೋನ್ ಕಂಪನಿ ಚೀನಾದ ಮೇಲಿನ ಅವಲಂಬನೆ ತಗ್ಗಿಸಲು ಹಲವು ಕ್ರಮ ಕೈಗೊಂಡಿದೆ. 2024ರ ಮಾರ್ಚ್​ನಿಂದ 2025ರ ಮಾರ್ಚ್​ನ ಅವಧಿಯಲ್ಲಿ ಆಪಲ್ ಭಾರತದಲ್ಲಿ 1.88 ಲಕ್ಷ ಕೋಟಿ ರೂ. ಮೌಲ್ಯದ ಫೋನ್​ಗಳನ್ನು ತಯಾರಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಐಫೋನ್ ತಯಾರಿಕೆಯಲ್ಲಿ ಶೇಕಡ 60ರಷ್ಟು ಹೆಚ್ಚಳ ಕಂಡುಬಂದಿದೆ. ಇದೇ ಅವಧಿಯಲ್ಲಿ ಭಾರತದಿಂದ 1.49 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್​ಗಳನ್ನು ಕಂಪನಿ ರಫ್ತು ಮಾಡಿದೆ. ಪ್ರಪಂಚದಾದ್ಯಂತದ ಸರಾಸರಿ ಐದು ಐಫೋನ್​ಗಳಲ್ಲಿ ಒಂದು ಭಾರತದಲ್ಲಿ ತಯಾರಾಗುತ್ತಿದೆ. ಕಂಪನಿಯು ಭಾರತದಲ್ಲಿ ಫಾಕ್ಸ್​ಕಾನ್ ಮತ್ತು ಟಾಟಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಮೂರು ಕಾರ್ಖಾನೆಗಳಲ್ಲಿ ಆಪಲ್ ಸಾಧನಗಳು ತಯಾರಾಗುತ್ತಿವೆ. ಅಲ್ಲದೆ, ಮತ್ತಷ್ಟು ಕಡೆ ಆಪಲ್ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.