ಮೈಸೂರು: ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಆತ್ಮಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ.ಕಾಟೂರು ಒತ್ತಾಯಿಸಿದರು.
ಕಿಡಿಗೇಡಿಯ ಬೆದರಿಕೆಗೆ ಮತ್ತು ಪೊಲೀಸರ ನಿರ್ಲಕ್ಷೃದಿಂದ ಮಾನಕ್ಕೆ ಹೆದರಿ ಒಂದೇ ಕುಟುಂಬದ ನಾಲ್ವರು ಮಹದೇಶ್ವರಬೆಟ್ಟದ ಸಮೀಪದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ತಂದೆ-ಮಗಳು ಮೃತಪಟ್ಟಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯಿಂದ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಆರೋಪಿ ಚೀರನಹಳ್ಳಿ ಲೋಕೇಶ, ಮಹದೇವ ನಾಯಕ ಅವರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನ ಕಳೆಯುತ್ತೇನೆಂದು ಬೆದರಿಸಿದ್ದ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಲಿಲ್ಲ. ಇದರಿಂದ ಮನನೊಂದ ಕುಟುಂಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದು, ಪ್ರಸ್ತುತ ನೀಡಿರುವ 16.50 ಲಕ್ಷ ರೂ. ಪರಿಹಾರ ಸಾಲದು. 50 ಲಕ್ಷ ರೂ. ನೀಡಬೇಕು ಹಾಗೂ ಹೆಣ್ಣು ಮಗಳಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ದೂರು ಸ್ವೀಕರಿಸದ ಪೊಲೀಸರಲ್ಲಿ ಇಬ್ಬರನ್ನು ಅಮಾನತುಗೊಳಿಸಿದ್ದು, ಅಮಾನತು ಮಾಡಿದರೆ ಸಾಲದು. ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯದಡಿ ಪ್ರಕರಣ ದಾಖಲಿಸಿ ಅವರನ್ನು ಕೆಲಸದಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಆರೋಪಿ ಚೀರನಹಳ್ಳಿ ಲೋಕೇಶ ಹಿಂದೆ ಇರುವ ಕೈ ಯಾರು ಎಂದು ಗೊತ್ತಾಗಬೇಕು. ಅವನ ವಿರುದ್ಧ ಪ್ರಕರಣ ದಾಖಲಾಗದಂತೆ ಒತ್ತಡ ತಂದವರು ಯಾರು ಎಂದು ತಿಳಿದು ಅವರಿಗೂ ತಕ್ಕ ಶಿಕ್ಷೆ ನೀಡಬೇಕು. ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ರಾಜಕೀಯ ತೆವಲಿಗೆ ಬಳಸಿಕೊಳ್ಳುತ್ತಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಬದಲು ರಾಜಕೀಯ ಬೆರೆಸಿ ನಾಯಕ ಸಮಾಜದ ಹೋರಾಟದ ದಿಕ್ಕನ್ನು ಬದಲಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಮುಖಂಡರಾದ ಶಿವಕುಮಾರಸ್ವಾಮಿ, ಉದ್ಬೂರು ಶಿವಣ್ಣ, ಕಣಿಯನಹುಂಡಿ ಸಿದ್ದು, ವಾಜಮಂಗಲ ಕುಮಾರ, ನೃಪತುಂಗ ಇದ್ದರು.