ಗೋಣಿಕೊಪ್ಪ: ಬೆಟ್ಟತ್ತೂರು ದೇವಾಲಯಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಶನಿವಾರ ಕಾಲ್ನಡಿಗೆಯಲ್ಲಿ ತೆರಳುವ ಮೂಲಕ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಮಾತಿನಂತೆ ದೇವಾಲಯದ ಆವರಣದ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ ರೂ.ಅನುದಾನ ನೀಡುವ ಮೂಲಕ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಸುಳ್ಯ ಸಮೀಪವಿರುವ ಬೆಟ್ಟತ್ತೂರು ಗ್ರಾಮಕ್ಕೆ ತೆರಳಿದ ಶಾಸಕ ಪೊನ್ನಣ್ಣ ಗ್ರಾಮಸ್ಥರ ಆರಾಧ್ಯ ದೈವ ಸುಬ್ರಹ್ಮಣ್ಯ ದೇವಾಲಯದ ಕುಸಿದು ಬಿದ್ದಿರುವ ತಡೆಗೋಡೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿದರು.
ಮುಖ್ಯರಸ್ತೆಯಿಂದ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿಯೇ ತೆರಳಿದ ಶಾಸಕ ಪೊನ್ನಣ್ಣ, ಎತ್ತರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇವಾಲಯಕ್ಕೆ ಪ್ರವೇಶ ಮಾಡಿದರು. ಈ ಹಿಂದೆ ಸುರಿದ ಭಾರಿ ಮಳೆಯಿಂದ ಗ್ರಾಮದ ದೇವಾಲಯದ ತಡೆಗೋಡೆ ಸಂಪೂರ್ಣ ಕುಸಿದು ಸಮಸ್ಯೆ ಉಂಟಾಗಿತ್ತು. ಈ ಕಾಮಗಾರಿಗೆ ಲಕ್ಷಾಂತರ ರೂ.ವೆಚ್ಚವಾಗುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಗ್ರಾಮಸ್ಥರಿಗೆ ಸಾಧ್ಯವಾಗಿರಲಿಲ್ಲ. 8 ತಿಂಗಳ ಹಿಂದೆ ಈ ಗ್ರಾಮಕ್ಕೆ ತೆರಳಿದ್ದ ಶಾಸಕ ಪೊನ್ನಣ್ಣ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದರು. ಇದೀಗ 8 ತಿಂಗಳ ನಂತರ ಬೆಟ್ಟತ್ತೂರು ಗ್ರಾಮಕ್ಕೆ ತೆರಳಿ ಅವರು, ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮಕ್ಕೆ ತೆರಳಿದ ಶಾಸಕರನ್ನು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ದೇವಾಲಯ ಆವರಣದಲ್ಲಿ ಶಾಸಕರನ್ನು ಸನ್ಮಾನಿಸಿದರು.
ಈ ವೇಳೆ ಗ್ರಾಮಸ್ಥರು ತಮ್ಮ ಹಲವು ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಮುಖ್ಯ ರಸ್ತೆಯ 6 ಕಿ.ಮೀ.ರಸ್ತೆ ಸಂಪೂರ್ಣ ಹಾಳಾಗಿದ್ದು, ಆದ್ಯತೆ ಮೇರೆಗೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ, ರಜಾ ದಿನದಲ್ಲಿ ಸರ್ಕಾರಿ ಬಸ್ ಬಾರದೆ ಇರುವ ಬಗ್ಗೆ ಗ್ರಾಮದ ಹಿರಿಯರು ಶಾಸಕರ ಗಮನಕ್ಕೆ ತಂದರು.
ಶಾಸಕ ಪೊನ್ನಣ್ಣ ಮಾತನಾಡಿ, ಈಗಾಗಲೇ ಸರ್ಕಾರದ ವತಿಯಿಂದ ರಸ್ತೆ ಅಭಿವೃದ್ಧಿಗೆ ಮಂಜೂರಾಗಿರುವ 17 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ಅವಧಿಯಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದ್ದು, ರಸ್ತೆ ಅಭಿವೃದ್ಧಿಯ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ರಜಾ ದಿನಗಳಲ್ಲಿ ಬಸ್ ಸಂಚಾರ ಇಲ್ಲದ ಬಗ್ಗೆ ಸ್ಥಳದಿಂದ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಾರದ ಎಲ್ಲ ದಿನಗಳಲ್ಲೂ ಬಸ್ ಸಂಚಾರ ನಡೆಸುವಂತೆ ನಿರ್ದೇಶನ ನೀಡಿದರು.
ಸುಬ್ರಹ್ಮಣ್ಯ ದೇವಾಲಯಕ್ಕೆ ತಡೆಗೋಡೆ ನಿರ್ಮಾಣದೊಂದಿಗೆ ಉತ್ತಮವಾದ ಮೆಟ್ಟಿಲುಗಳನ್ನೂ ಕಾಮಗಾರಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಗುಣಮಟ್ಟದ ಕಾಮಗಾರಿಗಳನ್ನು ನೋಡಿಕೊಳ್ಳುವಂತೆ ಗ್ರಾಮದ ಹಿರಿಯರಿಗೆ ತಿಳಿಸಿದರು. ಕಾಮಗಾರಿಯನ್ನು ಆದಷ್ಟು ಬೇಗನೆ ಮುಕ್ತಾಯಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಮಸ್ಥರ ಸಮ್ಮುಖದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪಿ.ರಮೇಶ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಲೀರ ಗಿರೀಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಸದಸ್ಯರಾದ ಕೇಟೊಳಿ ಮೋಹನ್‌ರಾಜ್, ತುಳಸಿ ಗಾಂಧಿಪ್ರಸಾದ್ ಬಂಗಾರ್‌ಕೋಡಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಕುಮಾರಸ್ವಾಮಿ, ಗುತ್ತಿಗೆದಾರ ಸಂತೋಷ್ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.