ನ್ಯೂಸ್

ರಾಜ್ಯದಲ್ಲಿ ಮತ್ತೊಂದು ಯಡವಟ್ಟು, ಕರೊನಾ ಸೋಂಕಿತನ ಜತೆಯಲ್ಲೇ 5 ವರ್ಷದ ಮಗು ಪಯಣ!

ಬಳ್ಳಾರಿ: ಐದು ವರ್ಷದ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕರೊನಾ ಸೋಂಕಿತ ತಂದೆ ಜತೆಯಲ್ಲೇ ಆಂಬುಲೆನ್ಸ್​ನಲ್ಲಿ ಕೋವಿಡ್​ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಗುವನ್ನು ಕರೆದೊಯ್ದಿದ್ದು, ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹೊರಗಡೆ ಕಳುಹಿಸಬಾರದು ಎಂದು ವೈದ್ಯಲೋಕ ಹೇಳುತ್ತಿದೆ. ಆದರೂ, ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ಆತನ ಮಗುವನ್ನು ಮಂಗಳವಾರ ರಾತ್ರಿ ಕರೆದೊಯ್ಯಲಾಗಿದೆ. ಇದನ್ನೂ ಓದಿರಿ ವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ

ಐದು ವರ್ಷದ ಮಗುವಿಗೆ ಪಿಪಿಇ ಕಿಟ್​ ನಮ್ಮ ಬಳಿಯಿಲ್ಲ. ಆ ಮಗುವಿಗೆ ತಂದೆ ಮತ್ತು ತಾಯಿ ಬಿಟ್ಟು ಬೇರೆ ಯಾರೂ ಇರದ ಕಾರಣ ಪಾಲಕರ ಒಪ್ಪಿಗೆ ಮೇರೆಗೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗಿದೆ. ಮಗುವಿಗೆ ಕೋವಿಡ್​ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್​.ಎಸ್​. ನಕುಲ್​ ಹೇಳಿದ್ದಾರೆ.

ಸೋಂಕಿತನನ್ನು ಮನೆಯಿಂದ ಕರೆದೊಯ್ಯಲು ಬಂದ ಆರೋಗ್ಯ ಇಲಾಖೆ ಸಿಬ್ಬಂದಿ, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಗುವನ್ನು ಕರೆದೊಯ್ದಿದ್ದಾರೆ. ಹೀಗಾದರೆ ಮಗುವಿಗೂ ಸೋಂಕು ಬರದೆ ಇರುತ್ತಾ? ಎಂದು ಸಾರ್ವಜನಿಕಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಂಕಿತ ಮತ್ತು ಆತನ ಪತ್ನಿಗೆ ಮಾತ್ರ ಪಿಪಿಇ ಕಿಟ್​ ಹಾಕಿಸಿ ಆಂಬುಲೆನ್ಸ್​ ಹತ್ತಿಸಿಕೊಂಡು ಹೋಗುವ ವಿಡಿಯೋ ವೈರಲ್​ ಆಗಿದೆ.

ಇತ್ತೀಚಿಗೆ ಕರೊನಾದಿಂದ ಮೃತಪಟ್ಟ 9 ಜನರ ಶವಗಳನ್ನು ಒಂದೇ ಗುಂಡಿಗೆ ಎಸೆದು ಮಣ್ಣುಮುಚ್ಚಿದ್ದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಯಡವಟ್ಟು ಸಂಭವಿಸಿದೆ.