ನ್ಯೂಸ್

ಹಾಸಿಗೆ ಗಲೀಜು ಮಾಡಿದ್ದಕ್ಕೆ 5 ವರ್ಷದ ಬಾಲಕನನ್ನು ಸೋದರತ್ತೆಯೇ ಕೊಂದಳು; ಅಪ್ಪನ ನೆರವು ಪಡೆದು ಶವ ಕಾಡಲ್ಲಿ ಹೂತಿಟ್ಟಳು..!

ಆಗ್ರಾ: ಮಕ್ಕಳು ಮನೆಯಲ್ಲಿ ಗಲೀಜು ಮಾಡಿದರೆ ಸಿಟ್ಟು ಬರುವುದು ಸಾಮಾನ್ಯ. ಆದರೆ ಹಾಸಿಗೆ ಗಲೀಜು ಮಾಡಿದ ಎಂಬ ಕಾರಣಕ್ಕೆ 5 ವರ್ಷದ ಬಾಲಕನನ್ನು ಆತನ ಸೋದರತ್ತೆಯೇ ಕೊಂದುಹಾಕಿದ ಪ್ರಕರಣ ವರದಿಯಾಗಿದೆ. ಮಾತ್ರವಲ್ಲ, ಕೊನೆಗೆ ಬಾಲಕನ ಶವವನ್ನು ಸಮೀಪದ ಕಾಡಿನಲ್ಲಿ ತಂದೆಯ ನೆರವಿನಿಂದ ಹೂತು ಹಾಕಿ, ಏನೂ ಗೊತ್ತಿರದಂತೆ ನಟಿಸಿದ್ದಾಳೆ.

ಉತ್ತರಪ್ರದೇಶದ ಫರೂಖಾಬಾದ್ ನ್ಯೂ ಫೌಜಿ ಕಾಲನಿಯಲ್ಲಿ ಮೂರು ದಿನಗಳ ಹಿಂದೆ ಇಂಥದ್ದೊಂದು ಪ್ರಕರಣ ನಡೆದಿದೆ. ಐದು ವರ್ಷದ ಬಾಲಕನನ್ನು ಕೊಂದು ಕಾಡಿನಲ್ಲಿ ಏಳು ಅಡಿ ಆಳದ ಗುಂಡಿ ತೆರೆದು ಹೂತು ಹಾಕಲಾಗಿದ್ದು, ಬಳಿಕ ಪೊಲೀಸರು ಶವ ಹೊರತೆಗೆದು ಪರೀಕ್ಷೆಗೆ ಕಳಿಸಿದ್ದಾರೆ. ಬಾಲಕನ ಮೈಮೇಲೆ ಗಾಯಗಳಾಗಿದ್ದು, ಆತನನ್ನು ಉಸಿರುಗಟ್ಟಿಸಿ ಸಾಯಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮೃತ ಪಟ್ಟ ಬಾಲಕನ ಹೆಸರು ಯಶ್ ಪ್ರತಾಪ್. ಈತನ ತಾಯಿ ಹಾಗೂ ಅಜ್ಜಿ ಇಬ್ಬರೂ ನಿಧನರಾಗಿದ್ದು, ತಂದೆ ಬ್ರಿಜೇಶ್ ಸಿಂಗ್ ಅವರ ಸೋದರಿ ಮನೆಗೆ ಹೋಗಿದ್ದ. ಆದರೆ ಬಾಲಕ ತನ್ನ ಸೋದರತ್ತೆ ಜತೆ ಜಾತ್ರೆಗೆ ಹೋಗಿದ್ದು, ಅಲ್ಲಿ ಕಳೆದುಹೋಗಿದ್ದಾನೆ ಎಂದು ಆತನ ಸೋದರ ಮಾವ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ತುಣುಕುಗಳನ್ನು ಸಂಗ್ರಹಿಸಿ ತನಿಖೆಗೆ ಇಳಿದಾಗ, ಬಾಲಕನ ತಂದೆ ತನ್ನ ಸೋದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನೇ ದಿನ ಬೇರೆ ಹೇಳಿಕೆ ನೀಡಿದ್ದನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಆಗ ಪೊಲೀಸರು ಬಾಲಕನ ಸೋದರತ್ತೆಯನ್ನು ಕರೆಸಿ ಮತ್ತೊಮ್ಮೆ ವಿಚಾರಣೆ ನಡೆಸಿದರು.

ಬಾಲಕ ಹಾಸಿಗೆ ಗಲೀಜು ಮಾಡಿದ್ದಕ್ಕೆ ಆತನನ್ನು ಮನೆ ಹೊರಗೆ ಕಳುಹಿಸಿ, ಬೀಗ ಹಾಕಿದ್ದೆ. ಸುಮಾರು ಮುಕ್ಕಾಲು ಗಂಟೆ ಬಿಟ್ಟು ಬಾಗಿಲು ತೆರೆದಾಗ ಆತ ಕಾಣಿಸಲಿಲ್ಲ ಎಂಬುದಾಗಿ ಹೇಳಿದ್ದಳು. ಅನುಮಾನಗೊಂಡ ಪೊಲೀಸರು ಆಕೆಯನ್ನು ಮತ್ತಷ್ಟು ತೀವ್ರವಾಗಿ ವಿಚಾರಣೆ ನಡೆಸಿದಾಗ, ಅವಳು ಬಾಲಕನನ್ನು ಸಾಯಿಸಿ ಶವ ಹೂತು ಹಾಕಿರುವ ವಿಷಯ ಹೇಳಿದ್ದಳು. ಆರೋಪಿ ಮಹಿಳೆ ಹಾಗೂ ಆಕೆಯ ತಂದೆ ಇಬ್ಬರ ಮೇಲೂ ಪ್ರಕರಣ ದಾಖಲಿಸಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)