ರಾಯ್ಪುರ್: ನಕ್ಸಲ್ ನಿಗ್ರಹ 'ಕೋಬ್ರಾ' ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿರುವ ಘಟನೆ ಛತ್ತಿಸ್ಗಢ್ದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ನಕ್ಸ್ಲ್ ಮೃತಪಟ್ಟಿದ್ದಾರೆ.
ಸಿಆರ್ಪಿಎಫ್ನ ಮೂವರು ಯೋಧರು ಹಾಗೂ ಬಿಜಾಪುರ ಜಿಲ್ಲಾ ಪೊಲೀಸ್ ಪಡೆಯ ಇಬ್ಬರು ಯೋಧರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜಾಫುರದ ಸಿಲಗರ್ ಅರಣ್ಯದಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮುಖಾಮುಖಿಯಾದ ಯೋಧರು ಹಾಗೂ ನಕ್ಸಲ್ರು ಭೀಕರ ಗುಂಡಿನ ಕಾಳಗ ನಡೆಸಿದ್ದಾರೆ. ಗುಂಡಿನ ಕಾಳಗ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ನೀರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಛತ್ತಿಸ್ಗಢದಲ್ಲಿ ನಕ್ಸಲರು ರಸ್ತೆ ಮಧ್ಯೆ ಇಟ್ಟಿದ್ದ ಐಇಡಿಗೆ ಮೂವರು ಜಿಲ್ಲಾ ಪೊಲೀಸ್ ಪಡೆಯ ಯೋಧರು ನಾರಾಯಣಪುರ್ ಜಿಲ್ಲೆಯಲ್ಲಿ ಹುತಾತ್ಮರಾಗಿದ್ದರು.