Film Set Accidents - ಭಾರತೀಯ ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ನಡೆದ ಅವಘಡಗಳಿಂದಾಗಿ ಕಳೆದ 10 ವರ್ಷಗಳಲ್ಲಿ 30ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ಅವುಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಸಂಭವಿಸಿದ್ದರೆ, ಕೆಲವು ಚಿತ್ರತಂಡದ ಸದಸ್ಯರ ಬೇಜವಾಬ್ದಾರಿತನ, ಕಳಪೆ ಪ್ಲ್ಯಾನಿಂಗ್ ಹಾಗೂ ಸರಿಯಾದ ಮುನ್ನೆಚ್ಚರಿಕಾ ಕ್ರಮ ವಹಿಸದ ಕಾರಣವೂ ಕೆಲ ಅಪಘಾತಗಳು ಸಂಭವಿಸಿವೆ. ಈಗ ಈ ವಿಷಯ ಮುನ್ನೆಲೆಗೆ ಬರಲು ಕಾರಣ, ಬುಧವಾರ (ಜೂ. 3) ಚೆನ್ನೈನ ಪೆರಂಬೂರಿನಲ್ಲಿರುವ ಬಿನ್ನಿ ಮಿಲ್ನಲ್ಲಿ ಎಸ್.ಜೆ.ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ "ಕಿಲ್ಲರ್' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ಸಮಯದಲ್ಲಿ ಬಲೂನ್ ತುಂಬಿಸುವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸೆಟ್ ಕಾರ್ಮಿಕರು ಗಾಯಗೊಂಡಿದ್ದರು. ತಕ್ಷಣ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದ್ದು, ಅಷ್ಟರಲ್ಲಿ 26 ವರ್ಷದ ಸೆಟ್ ಕಾರ್ಮಿಕ ಮದನ್ ಮೃತಪಟ್ಟಿದ್ದನೆಂದು ವೈದ್ಯರು ದೃಢಪಡಿಸಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
2026ರಲ್ಲಿ ಐದು ಸಾವು
ಭಾರತೀಯ ಸಿನಿಮಾ ಮಂದಿ ಪಾಲಿಗೆ 2026 ಸಾವಿನ ವರ್ಷವಾಗಿ ಪರಿಣಮಿಸಿದೆ. ಕಳೆದ ಮಾರ್ಚ್ನಲ್ಲಿ ಬೆಂಗಾಲಿ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಸಮುದ್ರದ ದಡದಲ್ಲಿ ಸೀರಿಯಲ್ ಶೂಟಿಂಗ್ ವೇಳೆ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಟನೆ ನಡೆಯಿತು. ತಮ್ಮ ಜತೆಗಿದ್ದ ಸಹನಟಿಯನ್ನು ರಸಲು ಹೋಗಿ, ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೆಲ ತಿಂಗಳ ಹಿಂದಷ್ಟೆ "ಜೈಲರ್ 2' ಶೂಟಿಂಗ್ ಸಮಯದಲ್ಲಿ ಸೆಟ್ ನಿರ್ಮಿಸುವಾಗ ಬಿದ್ದು ಕಾರ್ತಿಕೇಯ ಎಂಬ 28 ವರ್ಷದ ಸೆಟ್ ಕಾರ್ಮಿಕ ಮೃತಪಟ್ಟಿದ್ದ. ಇನ್ನು "ವೆಟ್ಟುವಂ' ಚಿತ್ರದಲ್ಲಿ ಕಾರು ಪಲ್ಟಿಯಾಗುವ ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ಎಸ್ಎಂ ರಾಜು ಎಂಬ ಸಾಹಸ ಕಲಾವಿದ ಬಲಿಯಾಗಿದ್ದ. ಕಳೆದ ತಿಂಗಳಷ್ಟೆ "ಫೌಜಿ' ಚಿತ್ರದ ಶೂಟಿಂಗ್ ಸ್ಪಾಟ್ಗೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ, ಚಿತ್ರತಂಡದ ತಾಂತ್ರಿಕ ಸದಸ್ಯರೊಬ್ಬರು ಮೃತಪಟ್ಟಿದ್ದರು.
ಸಾಲು ಸಾಲು ಅವಘಡಗಳು
* 2016ರಲ್ಲಿ ತಿಪ್ಪಗೊಂಡನಹಳ್ಳಿ ಡ್ಯಾಮ್ನಲ್ಲಿ "ಮಾಸ್ತಿಗುಡಿ' ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ನಿಂದ ಹಾರಿದ ನಟರಾದ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
* 2019ರಲ್ಲಿ "ರಣಂ' ಚಿತ್ರದ ಸಾಹಸ ಸನ್ನಿವೇಶಗಳ ಶೂಟಿಂಗ್ ಸಮಯದಲ್ಲಿ ಕಾರ್ ಸ್ಫೋಟಿಸಲು ಸಿಲಿಂಡರ್ ಅಳವಡಿಸಲಾಗಿತ್ತು. ಆದರೆ, ಸ್ಫೋಟದ ತೀವ್ರತೆಯಿಂದಾಗಿ ಸಮೀಪದಲ್ಲಿದ್ದ 29 ವರ್ಷದ ಮಹಿಳೆ ಮತ್ತು ಆಕೆಯ ಐದು ವರ್ಷದ ಪುತ್ರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
* 2020ರಲ್ಲಿ "ಇಂಡಿಯನ್ 2' ಚಿತ್ರೀಕರಣ ವೇಳೆ ಬೃಹತ್ ಸೆಟ್ ಬಿದ್ದು ಮೂವರು ಸ್ಥಳದಲ್ಲೇ * ನಿಧನರಾಗಿ, ಒಂಭತ್ತು ಮಂದಿ ಗಾಯಗೊಂಡ ಟನೆ ನಡೆದಿತ್ತು. ಆ ಕಾರಣದಿಂದಾಗಿಯೂ ಕೆಲ ತಿಂಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು.
* 2021ರಲ್ಲಿ "ಲವ್ ಯು ರಚ್ಚು' ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಕ್ರೇನ್ಗೆ ಹಗ್ಗ ಕಟ್ಟಿಕೊಂಡು ಸ್ಟಂಟ್ ಮಾಡುತ್ತಿದ್ದ ವಿವೇಕ್ ಎಂಬ ಸಾಹಸ ಕಲಾವಿದ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದರು.
* 2022ರಲ್ಲಿ "ವಿಡುತಲೈ ಭಾಗ 1' ಟ್ರೇನ್ ಸ್ಟಂಟ್ ಶೂಟಿಂಗ್ ವೇಳೆ ಬೋಗಿ ಮೇಲಿಂದ ಬಿದ್ದು ಸ್ಟಂಟ್ ಮಾಸ್ಟರ್ ಸುರೇಶ್ ವಿಧಿವಶರಾಗಿದ್ದರು
* 2024ರ ಜುಲೈನಲ್ಲಿ "ಸರ್ದಾರ್ 2' ಶೂಟಿಂಗ್ ಸಮಯದಲ್ಲಿ ಏಳುಮಲೆ ಎಂಬ 54 ವರ್ಷದ ಸಾಹಸ ಕಲಾವಿದ 20 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದರು
* 2024ರಲ್ಲಿ ಅಡಕಮಾರನಹಳ್ಳಿಯಲ್ಲಿ "ಮನದ ಕಡಲು' ಚಿತ್ರೀಕರಣದ ವೇಳೆ ಮೋಹನ್ ಕುಮಾರ್ ಎಂಬ 24 ವರ್ಷದ ಸೆಟ್ ಕಾರ್ಮಿಕ, ಲೈಟ್ ಅಳವಡಿಸುವಾಗ 30 ಅಡಿ ಎತ್ತರದಿಂದ ಏಣಿ ಮೇಲಿಂದ ಬಿದ್ದು ಮೃತಪಟ್ಟಿದ್ದ.
* 2025ರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ "ಕಾಂತಾರ ಭಾಗ 1' ಚಿತ್ರೀಕರಣದ ಸಮಯದಲ್ಲಿ ಹಲವು ಅವಘಡಗಳು ಸಂಭವಿಸಿದ್ದವು. ಸೆಟ್ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ವಿಧಿವಶರಾದ, ಸಿಬ್ಬಂದಿ ಕರೆತರುತ್ತಿದ್ದ ವಾಹನ ಅಪಘಾತಕ್ಕೀಡಾದ, ಜೋರು ಮಳೆಗೆ ಬೃಹತ್ ಸೆಟ್ಗಳು ಬಿದ್ದ ಘಟನೆಗಳಿಗೆ ಸಿನಿಮಾ ತಂಡ ಸಾಕ್ಷಿಯಾಗಿತ್ತು.
ಪ್ರತಿ ವಿಷಯದಲ್ಲೂ ಎಚ್ಚರಿಕೆ ಮುಖ್ಯ
"ಜೇಮ್ಸ್', "ಆವೇಷಂ', "ಜೈಲರ್ 2', "ಡ್ರ್ಯಾಗನ್' ಸೇರಿ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿರುವ ಚೇತನ್ ಡಿಸೋಜಾ, "ಸಾಹಸ ನಿರ್ದೇಶನದ ಕೆಲಸ ದೊಡ್ಡ ಜವಾಬ್ದಾರಿ. ಏಕೆಂದರೆ ರೋಪ್ ಸ್ಟಂಟ್, ಫೈರ್, ವಾಹನಗಳಲ್ಲಿ ಚೇಸ್, ಬ್ಲಾಸ್ಟ್ ಅಂತ ಅಪಾಯಕಾರಿ ಸಾಹಸ ಸನ್ನಿವೇಶಗಳಿರುತ್ತವೆ. ಹೀಗಾಗಿ ತುಂಬ ಮುನ್ನೆಚ್ಚರಿಕೆ ವಹಿಸಬೇಕು. ತಾಂತ್ರಿಕವಾಗಿ ಸಿದ್ಧತೆ ಬೇಕು. ಸಣ್ಣ ಸಿನಿಮಾ ಆಗಲಿ, ದೊಡ್ಡ ಸ್ಟಾರ್ ಸಿನಿಮಾ ಆಗಲಿ ಆಯಾ ಚಿತ್ರಗಳ ಆ್ಯಕ್ಷನ್ ಸನ್ನಿವೇಶಗಳಿಗೆ ತಕ್ಕಂತೆ ಸಿದ್ಧತೆ ಮಾಡಿಕೊಂಡಿರಬೇಕು. ಉತ್ತಮ ಗುಣಮಟ್ಟದ ಹಾರ್ನೆಸ್ ರೋಪ್ ಬಳಸಬೇಕು. ಒಂದು ಸನ್ನಿವೇಶದಲ್ಲಿ ಒಬ್ಬರ ಜೀವ ಪಣಕ್ಕಿದೆ ಎಂದ ಮೇಲೆ, ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ ಪ್ರತಿ ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ಕಾಲಕ್ಕೆ ತಕ್ಕಂತೆ ಬದಲಾಗುವ ತಂತ್ರಜ್ಞಾನವನ್ನೂ ನಾವು ಅಳವಡಿಸಿಕೊಳ್ಳುತ್ತಿರಬೇಕು. ಹಾಗಿದ್ದಾಗ ಮಾತ್ರ ಶೂಟಿಂಗ್ ಸೆಟ್ನಲ್ಲಿ ಅವಡಗಳನ್ನು ತಡೆಯಬಹುದು' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.