ಸಿಂಗ್ರೌಲಿ: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ರಿಲಯನ್ಸ್ ಪವರ್ ಮಾಲೀಕತ್ವದ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ನಡೆದ ಅವಘಡದಲ್ಲಿ ಐವರು ನಾಪತ್ತೆಯಾಗಿದ್ದಾರೆ.
ವಿದ್ಯುತ್ ಸ್ಥಾವರದ ವಿಷಕಾರಿ ತ್ಯಾಜ್ಯಗಳನ್ನು ಸಂಗ್ರಹಿಸುವ ಕೃತಕ ಕೊಳದ ಕಟ್ಟೆ ಒಡೆದು, ಅದರಲ್ಲಿದ್ದ ವಿಷಯುಕ್ತ ವಸ್ತು ಸುತ್ತಲಿನ ಸ್ಥಳಕ್ಕೆ ಹರಿದಿದೆ. ವಿದ್ಯುತ್ ಸ್ಥಾವರದ ಸುತ್ತಮುತ್ತ ವಿಷತ್ಯಾಜ್ಯವುಳ್ಳ ಕೆಸರು ಆವರಿಸಿದೆ.
ಈ ತ್ಯಾಜ್ಯಗುಂಡಿಯ ಸಮೀಪವೇ ಇದ್ದ ಮನೆಯಲ್ಲಿ ವಾಸವಾಗಿದ್ದ ಐವರು ಸದ್ಯ ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿ ಆಸುಪಾಸಿನಲ್ಲಿದ್ದ ಬೆಳೆಗೂ ಅಪಾರ ಹಾನಿಯುಂಟಾಗಿದೆ ಎಂದು ಸಿಂಗ್ರೌಲಿ ಜಿಲ್ಲಾಧಿಕಾರಿ ಕೆ.ವಿ.ಎಸ್.ಚೌಧರಿ ತಿಳಿಸಿದ್ದಾರೆ. ಕಾಣೆಯಾದವರನ್ನು ಶೀಘ್ರವೇ ಹುಡುಕಲಾಗುವುದು. ಬೆಳೆನಷ್ಟ ಪರಿಹಾರವನ್ನೂ ಸಂಬಂಧಪಟ್ಟ ರೈತರಿಗೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಗುಂಡಿಯ ಕಟ್ಟೆಯೊಡೆದು ವಿಷತ್ಯಾಜ್ಯಗಳು ಹೊರಗೆ ಬಂದು ಎಲ್ಲೆಡೆ ಹರಿಯುತ್ತಿರುವ ಫೋಟೋ, ವಿಡಿಯೋಗಳನ್ನು ಸ್ಥಳೀಯರು ವೈರಲ್ ಮಾಡಿದ್ದಾರೆ.
ಭೋಪಾಲ್ದಿಂದ 680 ಕಿ.ಮೀ.ದೂರದಲ್ಲಿರುವ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಮೂರನೇ ಅವಘಡ ಇದಾಗಿದ್ದು, ರಿಲಯನ್ಸ್ ಪವರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 21,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವುಳ್ಳ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ವಿಪರೀತ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಘಾಜಿಯಾಬಾದ್ ಬಿಟ್ಟರೆ ಸಿಂಗ್ರೌಲಿಯೇ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾದ ಕೈಗಾರಿಕಾ ಪ್ರದೇಶ. ಅದಕ್ಕೆ ಕಾರಣ ಈ ವಿದ್ಯುತ್ ಸ್ಥಾವರ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ತಿಳಿಸಿದೆ. (ಏಜೆನ್ಸೀಸ್)