ನ್ಯೂಸ್

ಎನ್​ಕೌಂಟರ್​ನಲ್ಲಿ 5 ಮಾವೋವಾದಿಗಳ ಹತ್ಯೆ.. ಇಬ್ಬರು ಯೋಧರಿಗೆ ಗಾಯ | Encounter

ರಾಯಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಶನಿವಾರ(ನವೆಂಬರ್​​ 16) ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲೀಯರು ಹತರಾಗಿದ್ದಾರೆ ಮತ್ತು ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆರಳಿದಾಗ ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿರುವ ಉತ್ತರ ಅಬುಜ್ಮದ್ ಅರಣ್ಯದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಎನ್‌ಕೌಂಟರ್ ಪ್ರಾರಂಭವಾಯಿತು. ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಬ್ಬರು ಯೋಧರನ್ನು ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಇಲ್ಲಿಯವರೆಗೆ ಐವರು ನಕ್ಸಲೀಯರ ಶವಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.

ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ರಾಜಧಾನಿ ರಾಯ್‌ಪುರಕ್ಕೆ ವಿಮಾನದಲ್ಲಿ ರವಾನಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸೇರಿದಂತೆ ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳ ನಂತರ ಈ ವರ್ಷ ಇದುವರೆಗೆ 197 ನಕ್ಸಲೀಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)