ನ್ಯೂಸ್

ಗುಡಿಸಲು ಸುಟ್ಟು ಭಸ್ಮ; ಮಲಗಿದ್ದಲ್ಲೇ ಸಜೀವ ದಹನವಾದ ಒಂದೇ ಕುಟುಂಬದ ಐದು ಮಂದಿ

ಉತ್ತರಪ್ರದೇಶ: ಗುಡಿಸಲೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ಇಂದು ನಡೆದಿದೆ.

ಸತೀಶ್ ಕುಮಾರ್, ಅವರ ಪತ್ನಿ ಕಾಜಲ್ ಮತ್ತು ಅವರ ಮೂವರು ಮಕ್ಕಳು ಮಲಗಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಟೆಂಡರ್‌ಗಳು ಗ್ರಾಮಕ್ಕೆ ಧಾವಿಸಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಬೆಂಕಿ ನಂದಿಸಲು ಯತ್ನಿಸಿದ ಸತೀಶ್ ಅವರ ತಾಯಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಎಲ್ಲರೂ ಸಜೀವದಹನವಾಗಿದ್ದಾರೆ. ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಮೌ ಬಂಜಾರದೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

'ಈ ಕುಟುಂಬ ಬೆಂಕಿಯಲ್ಲಿ ಸಜೀವ ದಹನವಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವು ವಿಧಿವಿಜ್ಞಾನ ತಂಡ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಶ್ವಾನ ದಳದ ತಂಡವನ್ನು ತನಿಖೆಗೆ ಕರೆಸಿದ್ದೇವೆ. ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ' ಎಂದು ಕಾನ್ಪುರ ದೇಹತ್ ಎಸ್ಪಿ ತಿಳಿಸಿದ್ದಾರೆ.