Red Fort : ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ನಡುವೆಯೇ ಕೆಂಪು ಕೋಟೆ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ "ಅಕ್ರಮ ವಲಸಿಗರನ್ನು" ಬಂಧಿಸಿರುವುದಾಗಿ ದೆಹಲಿ ಪೊಲೀಸರು ಮಂಗಳವಾರ (ಆಗಸ್ಟ್ 05) ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಕೇಂದ್ರದ ಬಳಿ ನಿಯೋಜಿಸಲಾದ ಪೊಲೀಸ್ ತಂಡವು ಅಕ್ರಮ ವಲಸಿಗರದನ್ನು ಬಂಧನ ಮಾಡಿದೆ. ಬಂಧಿತರು 20 ರಿಂದ 25 ವರ್ಷ ವಯಸ್ಸಿನ ಪುರುಷರು. ನಿಯಮಿತ ತಪಾಸಣೆಯ ಸಮಯದಲ್ಲಿ ಮಾನ್ಯ ಪ್ರವೇಶ ಪಾಸ್‌ಗಳನ್ನು ತೋರಿಸಲು ವಿಫಲರಾಗಿದ್ದಾರೆ ಮತ್ತು ಅವರು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಉಪ ಪೊಲೀಸ್ ಆಯುಕ್ತ (ಉತ್ತರ ಜಿಲ್ಲೆ) ರಾಜ ಬಂಥಿಯಾ ಮಾತನಾಡಿದ್ದು, ಆಗಸ್ಟ್ 4 ರಂದು ಐವರನ್ನು ಬಾಂಗ್ಲಾ ಪ್ರಜೆಗಳನ್ನು ಪೊಲೀಸ್ ಸಿಬ್ಬಂದಿ ತಡೆದರು. ವಿಚಾರಣೆಯ ಸಮಯದಲ್ಲಿ, ಸುಮಾರು ಮೂರ್ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೆಹಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದರು.
ಜುಲೈ 15 ರಿಂದ ಕೆಂಪು ಕೋಟೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ ಎಂದು ತಮಗೆ ತಿಳಿದಿಲ್ಲ ಎಂದು ಬಂಧಿತರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಬಂಧಿತರಿಂದ ಬಾಂಗ್ಲಾದೇಶದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ವಿಚಾರಣೆಯ ಸಮಯದಲ್ಲಿ ಅವರ ಬಳಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಚಟುವಟಿಕೆ ಬೆಳಕಿಗೆ ಬಂದಿಲ್ಲ ಎಂದು ಬಂಥಿಯಾ ಹೇಳಿದ್ದಾರೆ.
ಆಗಸ್ಟ್ 15ರ ಸ್ವತಂತ್ರ ಸಂಭ್ರಮಾಚರಣೆಗೂ ಮುನ್ನ ರಾಜಧಾನಿಯಾದ್ಯಂತ ಭದ್ರತಾ ಬಿಗಿಗೊಳಿಸುವಿಕೆಯ ಮಧ್ಯೆಯೇ ಈ ಘಟನೆ ನಡೆದಿದೆ. ಅಕ್ರಮ ವಲಸಿಗರನ್ನು, ವಿಶೇಷವಾಗಿ ಸೂಕ್ಷ್ಮ ಸ್ಥಾಪನೆಗಳ ಬಳಿ ವಾಸಿಸುವವರನ್ನು ಗುರುತಿಸಿ ಗಡೀಪಾರು ಮಾಡಲು ದೆಹಲಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಕೇಂದ್ರೀಯ ಸಂಸ್ಥೆಗಳು ಕೂಡ ಬಂಧಿತ ಐದು ಜನರನ್ನು ಪ್ರಶ್ನಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾನೂನು ಶಿಷ್ಟಾಚಾರದ ಪ್ರಕಾರ ಅವರನ್ನು ಈಗ ಗಡೀಪಾರು ಮಾಡಲಾಗುತ್ತಿದೆ. (ಏಜೆನ್ಸೀಸ್)