ಮುಂಬೈ: ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐದು ಮನೆಗಳು ಕುಸಿದು ಬಿದ್ದಿವೆ. ಚೆಂಬೂರಿನ ಗಾಲ್ಫ್ ಕ್ಲಬ್ ಬಳಿಯ ಓಲ್ಡ್ ಬ್ಯಾರಕ್ ನಲ್ಲಿ ಬೆಳಗ್ಗೆ 7.50ರ ಸುಮಾರಿಗೆ ಈ ಘಟನೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಇದುವರೆಗೆ 11 ಜನರನ್ನು ರಕ್ಷಿಸಲಾಗಿದ್ದು, ಈ ಪೈಕಿ ನಾಲ್ವರನ್ನು ಗೋವಂಡಿಯಲ್ಲಿರುವ ನಾಗರಿಕ-ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಇದು ನಾಲ್ಕರಿಂದ ಐದು ಎರಡು ಅಂತಸ್ತಿನ ಕಟ್ಟಡಗಳ ಕುಸಿತಕ್ಕೆ ಕಾರಣವಾಯಿತು. ಅಗ್ನಿಶಾಮಕ ದಳ, ಪೊಲೀಸ್, ನಾಗರಿಕ ಸಿಬ್ಬಂದಿ, ಆಂಬ್ಯುಲೆನ್ಸ್ ಸೇವೆ ಘಟನಾ ಸ್ಥಳದಲ್ಲಿ ಸಜ್ಜುಗೊಂಡಿವೆ ಎಂದು ನಾಗರಿಕ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.