ಜೋಗ ಮತ್ತು ಕಾರ್ಗಲ್ ಪಪಂ ಸಾಮಾನ್ಯ ಸಭೆಯಲ್ಲಿ ಚಂದ್ರಶೇಖರನಾಯ್ಕ, ಎಂ.ಕೆ.ಸುರೇಶ್, ಉಮೇಶ್, ಲಕ್ಷ್ಮೀರಾಜು, ಬಾಲಸುಬ್ರಹ್ಮಣ್ಯ ಇತರರಿದ್ದರು. 
ನ್ಯೂಸ್

ಅಭಿವೃದ್ಧಿಗೆ 5 ಕೋಟಿ ರೂ. ಕ್ರಿಯಾಯೋಜನೆ

ಕಾರ್ಗಲ್: ಜೋಗ ಮತ್ತು ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯು 44.43 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು ಇದಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಎಸ್‌ಎ್ಸಿ ವಿಶೇಷ ಅನುದಾನದಡಿ ಒಟ್ಟು 5 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ಸಾಗತ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ತಿಳಿಸಿದರು.
ಬುಧವಾರ ಹಮ್ಮಿಕೊಂಡಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 2022-23ನೇ ಸಾಲಿನಲ್ಲಿ ಈ ಹಿಂದೆ ನಿಗದಿಯಾದ ಎಸ್‌ಎ್ಸಿ ವಿಶೇಷ ಅನುದಾನದಡಿಯಲ್ಲಿ 2 ಕೋಟಿ ರೂ. ಜತೆಗೆ ಇನ್ನೂ 3 ಕೋಟಿ ರೂ. ಸೇರಿ ಅಭಿವೃದ್ಧಿ ಕಾಮಗಾರಿಗೆ ಪೂರಕವಾಗಿ ಒಟ್ಟು 5 ಕೋಟಿ ರೂ. ಕ್ರಿಯಾಯೋಜನೆಯನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ನಗರೋತ್ಥಾನ ಹಂತ 4ರಲ್ಲಿ ಕಾರ್ಗಲ್‌ಗೆ ನೂತನ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಅಳವಡಿಸಿಕೊಂಡಿದ್ದು ಇದಕ್ಕೆ 80 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತು. ಆದರೆ ಇದೀಗ ಈ ಹಣದ ಕೊರತೆ ಬೀಳಲಿದ್ದು ಇನ್ನೂ 2 ಕೋಟಿ ರೂ. ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು. ನೂತನ ಬಸ್ ನಿಲ್ದಾಣಕ್ಕೆ ಒಟ್ಟು 2.80 ಕೋಟಿ ರೂ. ವೆಚ್ಚ ತಗುಲಲಿದ್ದು ಇದಕ್ಕೆ ಪೂರಕವಾಗಿ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ಉಮೇಶ್, ಲಕ್ಷ್ಮೀರಾಜು, ಬಾಲಸುಬ್ರಹ್ಮಣ್ಯ, ನಾಗರಾಜ್ ವಾಟೆಮಕ್ಕಿ, ಎಂ.ರಾಜು, ಜಯಲಕ್ಷ್ಮೀ, ಕೆ.ಸಿ.ಹರೀಶ್, ಲಲಿತಾ ಮಂಜುನಾಥ್, ಸಭಾನಿರ್ವಾಹಕ ಲೋಕೇಶ್ ಮೂರ್ತಿ ಇತರರಿದ್ದರು.