Housing Complex : ರಾಷ್ಟ್ರ ರಾಜಧಾನಿ ದೆಹಲಿಯ ಬಾಬಾ ಖಾರಕ್ ಸಿಂಗ್ ಮಾರ್ಗದಲ್ಲಿ 184 ಸಂಸದರಿಗಾಗಿ ನಿರ್ಮಾಣವಾಗಿರುವ ಬಹು ವ್ಯವಸ್ಥೆಯುಳ್ಳ ಹೊಸ ವಸತಿ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಆಗಸ್ಟ್ 11) ಉದ್ಘಾಟಿಸಿದರು. ಇದೀಗ ವಸತಿ ಸಂಕೀರ್ಣದ ಒಳಗೆ ಏನೆಲ್ಲ ಐಷರಾಮಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಳ್ಳೋಣ.
ಅಂದಹಾಗೆ, ಲುಟ್ಯೆನ್ಸ್ ದೆಹಲಿಯ ಹಳೆಯ ಬಂಗಲೆಗಳನ್ನು ಆಧುನಿಕವಾಗಿ ಮತ್ತು ಬಹುಮಹಡಿ ಅಪಾರ್ಟ್‌ಮೆಂಟ್‌ಗಳೊಂದಿಗೆ ಬದಲಾಯಿಸುವ ಹೊಸ ಯೋಜನೆ ಇದಾಗಿತ್ತು. ಸದ್ಯ ಈ ಯೋಜನೆ ಪೂರ್ಣಗೊಂಡಿದೆ. ಪ್ರಸ್ತುತ ಹೊಸದಾಗಿ ನಿರ್ಮಾಣವಾಗಿರುವ ವಸತಿ ಸಂಕೀರ್ಣವು 4 ವಸತಿ ಗೋಪುರ ಅಥವಾ ಟವರ್ಗಳನ್ನು ಒಳಗೊಂಡಿದ್ದು, ಪ್ರತಿಯೊಂದೂ ಟವರ್ 23 ಮಹಡಿಗಳನ್ನು ಹೊಂದಿದೆ. 4 ಟವರ್ಗಳಲ್ಲಿ ಒಟ್ಟು 184 ಫ್ಲಾಟ್‌ಗಳು ಇವೆ.
ಪ್ರತಿ ಫ್ಲ್ಯಾಟ್ ಸುಮಾರು 461.5 ಚದುರ ಮೀಟರ್ ( ಅಂದಾಜು 5000 ಚದುರ ಅಡಿ) ಇದೆ. ಪ್ರತಿ ಫ್ಲ್ಯಾಟ್ನಲ್ಲಿ 5 ಬೆಡ್ರೂಮ್ಗಳಿದ್ದು, ಡ್ರೆಸ್ಸಿಂಗ್ ರೂಮ್ಸ್ ಮತ್ತು ಬಾತ್ರೂಮ್ಗಳನ್ನು ಹೊಂದಿದೆ. ಅಲ್ಲದೆ, ಮಾಡ್ಯುಲರ್ ವಾರ್ಡ್ರೋಬ್ಗಳು, ಡ್ರಾಯಿಂಗ್ ಮತ್ತು ಡೈನಿಂಗ್ ರೂಮ್, ಫ್ಯಾಮಿಲಿ ಲೌಂಜ್ ಕೂಡ ಇದೆ. ಇದರೊಂದಿಗೆ ಪ್ರತಿ ರೂಮ್ ಮತ್ತು ಕಚೇರಿಗೆ ಬಾಲ್ಕನಿಗಳನ್ನು ಸಹ ಒಳಗೊಂಡಿದೆ. ಇಡೀ ಫ್ಲ್ಯಾಟ್ ಬಹುವ್ಯವಸ್ಥೆಯೊಂದಿಗೆ ಐಷಾರಾಮಿಯಿಂದ ಕೂಡಿದೆ.
ಈ ಫ್ಲ್ಯಾಟ್ನಲ್ಲಿ ಪ್ರತ್ಯೇಕ ಪೂಜಾ ಕೋಣೆ ಕೂಡ ಇದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲಿ ಸಂಸದರು ಮತ್ತು ಅವರ ಸಹಾಯಕರಿಗೆ ಮೀಸಲಾದ ಕಚೇರಿಗಳೂ ಕೂಡ ಇವೆ. ಆ ಎರಡೂ ಕಚೇರಿಗಳು ಶೌಚಾಲಯಗಳನ್ನು ಒಳಗೊಂಡಿದ್ದು, ಅಡುಗೆಮನೆ ಮತ್ತು ಸ್ನಾನಗೃಹಗಳನ್ನು ಹೊಂದಿರುವ ಎರಡು ಪ್ರತ್ಯೇಕ ಸಿಬ್ಬಂದಿ ವಸತಿಗೃಹಗಳನ್ನು ಕೂಡ ಹೊಂದಿವೆ. ಇದಿಷ್ಟೇ ಅಲ್ಲದೆ, ಸಿಬ್ಬಂದಿ, ಸಂಸದರು ಮತ್ತು ಅವರ ಸಹಾಯಕರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿವೆ. ಈ ಫ್ಲಾಟ್‌ಗಳು ಅಡುಗೆ ಹಬ್‌ಗಳು ಮತ್ತು ಚಿಮಣಿಗಳನ್ನು ಅಳವಡಿಸಲಾದ ಮಾಡ್ಯುಲರ್ ಅಡುಗೆಮನೆಗಳನ್ನು ಹೊಂದಿವೆ.
ಇನ್ನೂ ಈ ಅಪಾರ್ಟ್‌ಮೆಂಟ್‌ಗಳು UPVC ಕಿಟಕಿಗಳು, ಕಚೇರಿ ಮತ್ತು ಮಾಸ್ಟರ್ ಬೆಡ್‌ರೂಮ್‌ನಲ್ಲಿ ಮರದ ನೆಲಹಾಸು, ಉಳಿದ ಕಡೆ ವಿಟ್ರಿಫೈಡ್ ನೆಲಹಾಸು ಮತ್ತು VRV ವ್ಯವಸ್ಥೆಯ ಮೂಲಕ ಕೇಂದ್ರ ಹವಾನಿಯಂತ್ರಣದಂತಹ ಸೌಲಭ್ಯಗಳನ್ನು ಒಳಗೊಂಡಿವೆ. ಉಳಿದಂತೆ ವಿಡಿಯೋ ಡೋರ್ ಫೋನ್‌ಗಳು, ವೈಫೈ, ಕೇಂದ್ರೀಕೃತ ಕೇಬಲ್ ಟಿವಿ, ಇಪಿಎಬಿಎಕ್ಸ್ ಟೆಲಿಫೋನ್‌ಗಳು, ಪೈಪ್ಡ್ ನೈಸರ್ಗಿಕ ಅನಿಲ, ಆರ್‌ಒ ನೀರಿನ ವ್ಯವಸ್ಥೆಗಳು, ರೆಫ್ರಿಜರೇಟರ್‌ಗಳು ಮತ್ತು ಅಡುಗೆಮನೆಯ ಗೀಸರ್‌ಗಳೂ ಸೇರಿವೆ.
ಆರು ಅಂತಸ್ತಿನ ಅಮೆನಿಟಿ ಬ್ಲಾಕ್ ವಸತಿ ಅಂಗಡಿಗಳು, ಸೇವಾ ಕೇಂದ್ರ, ಔಷಧಾಲಯ, ಸಮುದಾಯ ಭವನ, ಕ್ಯಾಂಟೀನ್, ಕ್ಲಬ್, ಜಿಮ್, ಯೋಗ ಕೊಠಡಿಗಳು ಮತ್ತು ಅತಿಥಿ ವಸತಿ ಸೌಕರ್ಯಗಳು ಸಹಾಯಕ ಅಥವಾ ಹೆಚ್ಚುವರಿ ಸೌಲಭ್ಯಗಳಲ್ಲಿ ಸೇರಿವೆ. ಎರಡು ನೆಲಮಾಳಿಗೆಯನ್ನು ಹೊಂದಿದ್ದು, 612 ವಾಹನಗಳಿಗೆ ಪಾರ್ಕಿಂಗ್ ಲಭ್ಯವಿದೆ. ಈ ವಸತಿ ಸಂಕೀರ್ಣವು 400 kWp ಸಾಮರ್ಥ್ಯದ ಮೇಲ್ಛಾವಣಿ ಸೌರ ಫಲಕಗಳು, ಮಳೆನೀರು ಕೊಯ್ಲು, ಒಳಚರಂಡಿ ಸಂಸ್ಕರಣೆ ಮತ್ತು ನೀರಿನ ಮರುಬಳಕೆ, ಡ್ಯುಯಲ್ ಪ್ಲಂಬಿಂಗ್, ಇಂಧನ-ಸಮರ್ಥ ಬೆಳಕು ಮತ್ತು ಫ್ಯಾನ್‌ಗಳು ಮತ್ತು ಕಸದ ಚ್ಯೂಟ್‌ಗಳಂತಹ ಹಸಿರು ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ಒಳಗೊಂಡಿದೆ.
ಇಡೀ ಕ್ಯಾಂಪಸ್, ಸಿಸಿಟಿವಿ ಕ್ಯಾಮೆರಾಗಳು ಮತ್ತು ಬೂಮ್ ತಡೆಗೋಡೆಗಳಿಂದ ಸುರಕ್ಷಿತವಾಗಿದೆ. ಹುಲ್ಲುಹಾಸುಗಳು, ಕಾಂಕ್ರೀಟ್ ರಸ್ತೆಗಳು ಮತ್ತು ಬೆಳಕಿನೊಂದಿಗೆ ನಡಿಗೆ ಮಾರ್ಗಗಳು, ಸಾರ್ವಜನಿಕ ಶೌಚಾಲಯಗಳು, ಎಟಿಎಂ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾದ ಕಲಾ ಸ್ಥಾಪನೆಗಳು ಕೂಡ ಇವೆ.
ಸಂಸತ್ತು, ರಾಷ್ಟ್ರಪತಿ ಭವನ ಮತ್ತು ಪ್ರಮುಖ ಸರ್ಕಾರಿ ಕಚೇರಿಗಳಿಂದ ಕೆಲವೇ ನಿಮಿಷಗಳ ದೂರದಲ್ಲಿರುವ ಈ ಸಂಕೀರ್ಣವು ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿದೆ, ಇದು ಸಂಸತ್ತಿನ ಬೀದಿ ಮತ್ತು ಕನ್ನಾಟ್ ಪ್ಲೇಸ್ ಅನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಮೂರು ಪ್ರವೇಶ ದ್ವಾರಗಳು ಈ ರಸ್ತೆಗೆ ನೇರವಾಗಿ ತೆರೆದುಕೊಳ್ಳುತ್ತವೆ. ಹೀಗಾಗಿ ಇದು ಅತ್ಯುತ್ತಮ ಸಂಪರ್ಕವನ್ನು ನೀಡುತ್ತದೆ. ವಸತಿ ಗೋಪುರಗಳಿಗೆ ಭಾರತೀಯ ನದಿಗಳಾದ ಸಬರಮತಿ ಮತ್ತು ಕೋಸಿಯ ಹೆಸರನ್ನು ಇಡಲಾಗಿದೆ. ಪ್ರತಿ ಮಹಡಿಯಲ್ಲಿ ಎರಡು ಫ್ಲಾಟ್‌ಗಳಿವೆ, ಇವುಗಳನ್ನು ಸಂಸದರು ಮತ್ತು ಸಿಬ್ಬಂದಿಗೆ ಪ್ರತ್ಯೇಕ ಲಿಫ್ಟ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ವಸತಿ ಸ್ಥಳಗಳ ಜೊತೆಗೆ, ಖಾಸಗಿ ಕಚೇರಿಗಳು, ಪಿಎ ಕೆಲಸದ ಸ್ಥಳಗಳು ಮತ್ತು ಪ್ರಾರ್ಥನಾ ಕೊಠಡಿಗಳನ್ನು ಒದಗಿಸುತ್ತದೆ.
ಕ್ಷಿಪ್ರ ಅಲ್ಯೂಮಿನಿಯಂ ಫಾರ್ಮ್‌ವರ್ಕ್ ವಿಧಾನವಾದ ಮಿವಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಒಂಬತ್ತು ತಿಂಗಳಲ್ಲಿ ನಿರ್ಮಿಸಲಾಗಿದೆ. ಆರಂಭದಲ್ಲಿ 550 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು, ಆದರೆ ವೆಚ್ಚವು 680 ಕೋಟಿ ರೂ.ಗೆ ಏರಿತು. ಈ ಹಿಂದೆ 16 ಗೋಪುರಗಳಲ್ಲಿ 243 ಫ್ಲಾಟ್‌ಗಳನ್ನು ಹೊಂದಿದ್ದ ಈ ಹಿಂದಿನ ಸರ್ಕಾರಿ ವಸತಿ ಸಂಕೀರ್ಣವನ್ನು ಈ ನೂತನ ವಸತಿಒ ಸಂಕೀರ್ಣ ಬದಲಾಯಿಸುತ್ತದೆ. ಈ ಹಿಂದಿನ ಕಟ್ಟಡಗಳನ್ನು ಕೆಡವಿ ಹೊಸದಾಗಿ, ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದೆ.
ಹೊಸ ವಸತಿ ಸಂಕೀರ್ಣವು ಸಂಸದರು, ಅವರ ಕುಟುಂಬಗಳು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು 2,468 ನಿವಾಸಿಗಳಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ (CPWD)ಯಿಂದ ಮೀಸಲಾದ ನಿರ್ವಹಣಾ ತಂಡವು ದಿನದ 24 ಗಂಟೆಗಳ ಕಾಲ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಒದಗಿಸುತ್ತದೆ. ಅಂದಹಾಗೆ, ಉದ್ಘಾಟನೆ ದಿನದಂದೇ ಪ್ರಧಾನಿ ಮೋದಿ ಅವರು ಪ್ರತಿ ಸಂಸದರಿಗೆ ಹಂಚಿಕೆಯಾದ ಫ್ಲ್ಯಾಟ್ಗಳ ಕೀಗಳನ್ನು ಹಸ್ತಾಂತರ ಮಾಡಿದರು. (ಏಜೆನ್ಸೀಸ್)