ಶಿವಮೊಗ್ಗ: ಮ್ಯಾಮ್ಕೋಸ್(ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ) 2023-24ನೇ ಸಾಲಿನಲ್ಲಿ 5.25 ಕೋಟಿ ರೂ. ಲಾಭ ಗಳಿಸಿದ್ದು, ಇದು ಕಳೆದ ಆರ್ಥಿಕ ವರ್ಷಕ್ಕಿಂತಲೂ 83.78 ಲಕ್ಷ ರೂ. ಅಧಿಕವಾಗಿದೆ ಎಂದು ಸಂಘದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಮ್ಯಾಮ್ಕೋಸ್ ಕೇಂದ್ರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ 84ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮ್ಯಾಮ್ಕೋಸ್ ಆರ್ಥಿಕ ಶಿಸ್ತು ಮತ್ತು ಸದೃಢತೆ ಕಾಯ್ದುಕೊಂಡು ಆಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿಯಲ್ಲೇ ಮುಂದುವರಿದಿದೆ ಎಂದರು.
ಇತ್ತೀಚೆಗೆ ಸಂಸ್ಥೆಯಿಂದ ಕಾಳುಮೆಣಸು ಖರೀದಿ ಆರಂಭಿಸಿದ್ದು, 2024-25ನೇ ಸಾಲಿನಲ್ಲಿ ಆಗಸ್ಟ್ ಅಂತ್ಯದವರೆಗೆ ಅಂದಾಜು 36 ಕ್ವಿಂಟಾಲ್ ಕಾಳುಮೆಣಸು ಖರೀದಿಸಲಾಗಿದೆ. ಪ್ರಸ್ತುತ ಎಲ್ಲ ಶಾಖೆಗಳಲ್ಲೂ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಸದಸ್ಯರು, ಅವರ ಕುಟುಂಬದ ಸದಸ್ಯರು ಹಾಗೂ ಅವರ ಜಮೀನಿನಲ್ಲಿ ಕಾರ್ಯನಿರ್ವಹಿಸುವ ಕೃಷಿ ಕೂಲಿ ಕಾರ್ಮಿಕರಿಗೆ ಸಂಬಂಧಿಸಿ ಜಾರಿಯಲ್ಲಿರುವ ಗುಂಪು ವಿಮೆ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ 13,496 ಸದಸ್ಯರು, 13,551 ಕೂಲಿ ಕಾರ್ಮಿಕರು ಹಾಗೂ 301 ಕುಟುಂಬಗಳ ಸದಸ್ಯರು ಸೇರಿ ಒಟ್ಟು 27,348 ಮಂದಿ ನೋಂದಣಿಯಾಗಿದ್ದಾರೆ ಎಂದರು.
ಸಂಘದ ಸದಸ್ಯರ ಬಹುದಿನದ ಬೇಡಿಕೆ ಮೇರೆಗೆ 10 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಬೆಳೆಗಳಿಗೆ ಅನುಕೂಲವಾಗುವಂತೆ ಮ್ಯಾಮ್ಕೋಸ್ ಸಸ್ಯ ಚೈತನ್ಯ ಹಾಗೂ ವಸುಧಾ ಸಿರಿ ಸಾವಯವ ಗೊಬ್ಬರಕ್ಕೆ ಬೇಡಿಕೆಯಿದೆ. ಗರಿಷ್ಠ ಪ್ರಮಾಣದಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಮ್ಯಾಮ್ಕೋಸ್ ಬ್ರಾೃಂಡ್‌ನಲ್ಲೇ ಸದಸ್ಯರಿಗೆ ಮೈಲುತುತ್ತ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ನಿರ್ದೇಶಕರಾದ ಸುರೇಶ್ಚಂದ್ರ, ಕೆ.ರತ್ನಾಕರ, ಸಿ.ಬಿ.ಈಶ್ವರಪ್ಪ, ಬಿ.ಸಿ.ನರೇಂದ್ರ, ಕೆ.ಕೀರ್ತಿರಾಜ್, ಕೆ.ವಿ.ಕೃಷ್ಣಮೂರ್ತಿ, ಟಿ.ಕೆ.ಪರಾಶರ, ಟಿ.ಆರ್.ಭೀಮರಾವ್, ಎಸ್.ಎಂ.ತಿಮ್ಮಪ್ಪ, ವೈ.ಎಸ್.ಸುಬ್ರಹ್ಮಣ್ಯ, ಕೆ.ಕೆ.ಜಯಶ್ರೀ ಇತರರಿದ್ದರು