ನ್ಯೂಸ್

ಸಹಾಯದ ನೆಪ, ಮಹಿಳೆಗೆ 5.17 ಲಕ್ಷ ಧೋಖಾ

ಬೆಂಗಳೂರು: ಬಡ್ಡಿ ಇಲ್ಲದೆ ಸಾಲ ಕೊಡುವುದಾಗಿ ನಂಬಿಸಿ ಮಹಿಳೆಯಿಂದ 5.17 ಲಕ್ಷ ರೂ. ಪಡೆದು ಸೈಬರ್ ಕಳ್ಳರು ಮೋಸ ಮಾಡಿದ್ದಾರೆ.

ಗಾಂಧಿನಗರ ನಿವಾಸಿ ವಿ. ಸರಳಾ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡಿ. 14ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಹರ್ಷಸಾಯಿ ಎಂದು ಪರಿಚಯ ಮಾಡಿಕೊಂಡು ‘ನಾನು ವಿದೇಶದಲ್ಲಿ ಇದ್ದೇನೆ. ನನ್ನದೊಂದು ದೊಡ್ಡ ಟ್ರಸ್ಟ್ ಭಾರತದಲ್ಲಿದೆ. ಅದರಿಂದ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದೇನೆ. ನಿಮಗೆ ಏನಾದರೂ ಬೇಕಾದರೇ ಹೇಳಿ’ ಎಂದು ಆಸೆ ಹುಟ್ಟಿಸಿದ್ದ.

ಅದಕ್ಕೆ ಸರಳಾ, ಬಡ್ಡಿರಹಿತವಾಗಿ 3 ಲಕ್ಷ ರೂ. ಸಾಲ ಕೊಟ್ಟರೆ ಸಾಕು. ವಾಪಸ್ ಕೊಡುತ್ತೇನೆ ಎಂದು ಕೇಳಿದ್ದರು. ಆಗ ಹರ್ಷಸಾಯಿ, ‘ಸಾಲ ಕೊಡುತ್ತೇನೆ. ಆ ಹಣ ವಾಪಸ್ ಕೊಡುವುದು ಬೇಡ. ಬದಲಿಗೆ ಆ ಹಣದಿಂದ ಮತ್ತೊಬ್ಬರಿಗೆ ಸಹಾಯ ಮಾಡಿ ಸಾಕು. ನಿಮಗೆ 5 ಸಾವಿರ ಡಾಲರ್ ಕೊಡುತ್ತೇನೆ. ಈಗ ಆರ್‌ಬಿಐ ಕೋಲ್ಕತಾ ಶಾಖೆಗೆ ಕರೆ ಮಾಡಿ’ ಎಂದು ಹೇಳಿ ನಂಬರ್ ಕೊಟ್ಟಿದ್ದ. ಇದನ್ನು ನಂಬಿದ ಸರಳಾ, ಆ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ, ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ.

5 ಸಾವಿರ ಡಾಲರ್ ಇದ್ದು, ಇದರ ಮೊತ್ತ 5.93 ಲಕ್ಷ ರೂ. ಆಗಲಿದೆ. ಇದನ್ನು ರೂಪಾಯಿಗೆ ಬದಲಾವಣೆ ಮಾಡಲು 8 ಸಾವಿರ ರೂ. ಶುಲ್ಕ ಮತ್ತು 25 ಸಾವಿರ ರೂ. ಆದಾಯ ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದ. ಮಹಿಳೆ ಅಷ್ಟು ಹಣವನ್ನು ಪಾವತಿಸಿದ್ದಳು. ಇದಾದ ಮೇಲೆ ಮತ್ತೆ ‘ಹೆಲ್ಪ್ ಕಾರ್ಡ್ ಮಾಡಿಕೊಡುತ್ತೇವೆ. 6 ತಿಂಗಳಿಗೊಮ್ಮೆ 68 ಲಕ್ಷ ರೂ. ನಿಮ್ಮ ಖಾತೆಗೆ ಬರಲಿದೆ. ಇದನ್ನು ಮಾಡಿಸಲು 75 ಸಾವಿರ ರೂ. ಪಾವತಿ ಮಾಡಿ’ ಎಂದು ಸೂಚಿಸಿದ್ದ. 68 ಲಕ್ಷ ರೂ. ಆಸೆಗೆ ಬಿದ್ದ ಮಹಿಳೆ, 75 ಸಾವಿರ ರೂ. ಪಾವತಿಸಿದ್ದಳು. ಇದೇ ರೀತಿ ಬೇರೆ ಬೇರೆ ಕಾರಣ ಹೇಳಿ ಸರಳಾ ಕಡೆಯಿಂದ 5.17 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.