ನ್ಯೂಸ್

4ರಂದು ನೃತ್ಯ ಪ್ರಕಾರಗಳ ವಿಶ್ವರೂಪ ದರ್ಶನ

ಮೈಸೂರು: ಜಾರ್ಖಂಡ್‌ನ ಪೈಕಾ ನೃತ್ಯ ಪ್ರಾಕಾರ, ಲಡಾಕ್‌ನ ಕಥೋಕ್ ಚೆನ್ಮೋ ನೃತ್ಯ ರೂಪ, ಮಧ್ಯಪ್ರದೇಶದ ಮಟ್ಕಿ ನೃತ್ಯ ಪ್ರಕಾರ, ಕರಾವಳಿ ಕರ್ನಾಟಕದ ಜನಪ್ರಿಯ ಹುಲಿ ನೃತ್ಯ (ಪಿಲಿ ನಲಿಕೆ)….ಹೀಗೆ ನಮ್ಮ ದೇಶದ ನಾನಾ ಭಾಗಗಳಲ್ಲಿ ಪ್ರಸಿದ್ಧಿಯಾಗಿರುವ ನೃತ್ಯ ಪ್ರಕಾರಗಳು ನಮ್ಮಲ್ಲಿನ ಬಹುತೇಕರಿಗೆ ಇನ್ನೂ ಅಪರಿಚಿತ.

ದೇಶದ ನಾನಾ ರಾಜ್ಯಗಳ ಈ ಎಲ್ಲ ಸ್ಥಳೀಯ ಜನಪ್ರಿಯ ನೃತ್ಯ ಪ್ರಕಾರಗಳು ನಮ್ಮ ಸಂಸ್ಕೃತಿಯನ್ನು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾಗಿಸಿವೆ. ನಮ್ಮಲ್ಲಿನ ವಿವಿಧತೆಯಲ್ಲಿನ ಏಕತೆಯ ಕಲ್ಪನೆಗೆ ಅವುಗಳೂ ಕಾರಣವಾಗಿವೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಎಲ್ಲ ನೃತ್ಯ ಪ್ರಕಾರಗಳ ವಿಶ್ವರೂಪ ದರ್ಶನ ಆ.4 ರಂದು ಸಂಜೆ 4 ಗಂಟೆಗೆ ನಗರದ ಕೆಎಸ್‌ಒಯು ಘಟಿಕೋತ್ಸವ ಸಭಾಂಗಣದಲ್ಲಿ ನಡೆಯಲಿದೆ.


ನಗರದ ಪೂರ್ಣ ಚೇತನ ಶಾಲೆ ವಿದ್ಯಾರ್ಥಿಗಳು ದೇಶದ ಎಲ್ಲ ರಾಜ್ಯಗಳ ಸ್ಥಳೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ನಮ್ಮ ರಾಜ್ಯಗಳಲ್ಲಿ ಪ್ರಸಿದ್ಧವಾಗಿರುವ ಜನಪ್ರಿಯ ನೃತ್ಯ ಪ್ರಕಾರಗಳನ್ನು ವಿದ್ಯಾರ್ಥಿಗಳು ನಗರದ ನೃತ್ಯಪ್ರಿಯರ ಎದುರು ಪ್ರಸ್ತುತಪಡಿಸಲಿದ್ದಾರೆ. ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಶ್ರೀಕಾರ ಹಾಡಲಿದ್ದಾರೆ. ಎರಡು ಗಂಟೆಗಳ ಪ್ರದರ್ಶನದಲ್ಲಿ ಈ ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆಯ ಕಲ್ಪನೆಯನ್ನು ಪ್ರಸ್ತುತ ಪಡಿಸಲಿದ್ದಾರೆ.
ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿವರೆಗಿನ 525 ವಿದ್ಯಾರ್ಥಿಗಳು ಅಂದು ಸಂಜೆ ಎಲ್ಲರನ್ನೂ ಭಾರತೀಯ ನೃತ್ಯ ಪ್ರಕಾರಗಳ ಗಂಧರ್ವ ಲೋಕಕ್ಕೆ ಕರೆದೊಯ್ಯಲಿದ್ದಾರೆ.