ಮಹತ್ವಾಕಾಂಕ್ಷೆಯ ಹಸಿರು ಸಂವಾದ ಅಭಿಯಾನಕ್ಕೆ 46 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‌್ಯ ಡಾ ಕುರಿಯನ್ ಹೇಳಿದರು.
ಮಂಗಳೂರು: ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ಹಸಿರು ಸಂವಾದ ಅಭಿಯಾನಕ್ಕೆ 46 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‌್ಯ ಡಾ ಕುರಿಯನ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪರ್ಯಾವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಯೋಜನೆಯಡಿ ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ನದಿಗಳ ಮೂಲಕ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿತಗೊಳಿಸಲು ಗ್ರಾಮ ಮಟ್ಟದಲ್ಲಿಯೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಅಭಿಯಾನವನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತವು ಜುಲೈಆಗಸ್ಟ್ 2026ರವರೆಗೆ ನಡೆಯಲಿದ್ದು, ಕ್ಷೇತ್ರ ಸಮೀಕ್ಷೆ, ಮಾಹಿತಿ ಸಂಗ್ರಹ, ತ್ಯಾಜ್ಯ ಸಮಸ್ಯೆಗಳ ಮೌಲ್ಯಮಾಪನ ಹಾಗೂ ಜನಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾಲುದಾರಿಕೆಯನ್ನು ಬಲಪಡಿಸಲಾಗುತ್ತದೆ ಎಂದರು.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಲು ಚೋಟಾ ಕಾಪ್ ಯೋಜನೆ ಜಾರಿಗೊಳ್ಳಲಿದೆ. ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಯುವಜನರಲ್ಲಿ ಹೊಸ ತಂತ್ರಜ್ಞಾನ ಹಾಗೂ ನವೀನ ಆಲೋಚನೆಗಳಿಗೆ ಉತ್ತೇಜನ ನೀಡಲು ಐಡಿಯಾಥಾನ್ ಆಯೋಜಿಸಲಾಗುತ್ತಿದ್ದು, ಆಯ್ಕೆಯಾಗುವ ಪರಿಸರ ಸ್ನೇಹಿ ಆವಿಷ್ಕಾರಗಳಿಗೆ ಅಭಿವೃದ್ಧಿ ನಿಧಿಯನ್ನೂ ಒದಗಿಸಲಾಗುತ್ತದೆ. ಎರಡನೇ ಹಂತವು ಆಗಸ್ಟ್ನಿಂದ ನವೆಂಬರ್‌ವರೆಗೆ ನಡೆಯಲಿದ್ದು, ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ2026 ಅನುಸಾರ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ನದಿಗಳ ಮೇಲ್ಮೈ ಹಾಗೂ ನೀರಿನ ಅಡಿಯಲ್ಲಿರುವ ತ್ಯಾಜ್ಯ ತೆರವು, ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ, ಸಂಗ್ರಹ ಮತ್ತು ಮರುಬಳಕೆ ವ್ಯವಸ್ಥೆ, ಮರುಸಂಸ್ಕರಣೆಗೆ ಅಸಾಧ್ಯವಾದ ತ್ಯಾಜ್ಯದ ಸೂಕ್ತ ವಿಲೇವಾರಿ, ಸ್ವಚ್ಛ ಗ್ರಾಮ ಸ್ಪರ್ಧೆ, ಪರಿಸರ ಜಾಗೃತಿ ಮೂಡಿಸುವ ರೀಲ್ಸ್ ಸ್ಪರ್ಧೆ, ಫನ್ನಿ ರಿಪೋರ್ಟರ್ಸ್, ವಿದ್ಯಾರ್ಥಿ ಚಟುವಟಿಕೆಗಳು ಹಾಗೂ ವಿವಿಧ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
*ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸಮ್ಮೇಳನ
ಮೂರನೇ ಹಂತವಾಗಿ ಡಿಸೆಂಬರ್ 2026ರಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುತ್ತದೆ. ಭಾಗವಹಿಸುವ ಗ್ರಾಮ ಪಂಚಾಯಿತಿಗಳು ತಮ್ಮ ತ್ಯಾಜ್ಯ ನಿರ್ವಹಣಾ ಅನುಭವ ಮತ್ತು ಸಾಧನೆಗಳನ್ನು ಪ್ರಸ್ತುತಪಡಿಸಲಿದ್ದು, ದೇಶದ ಖ್ಯಾತ ಪರಿಸರ ವಿಜ್ಞಾನಿಗಳು, ತಜ್ಞರು ಮತ್ತು ಪರಿಸರ ಹೋರಾಟಗಾರರು ವೈಜ್ಞಾನಿಕ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಮಟ್ಟದ ಯಶಸ್ವಿ ಮಾದರಿಗಳನ್ನು ರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಲಿದೆ. ಸಮ್ಮೇಳನದ ಸಮಾರೋಪದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗಳಿಗೆ ಸೇರುವ ಪ್ರಮಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆಗೊಳಿಸಿದ ಗ್ರಾಮಕ್ಕೆ ಪ್ರತಿಷ್ಠಿತ ಸ್ವಚ್ಛ ಗ್ರಾಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉತ್ತಮ ಸಾಧನೆ ತೋರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ವೇಸ್ಟ್ ವಾರಿಯರ್ಸ್, ವಿದ್ಯಾರ್ಥಿಗಳು ಹಾಗೂ ಸ್ಪರ್ಧೆಗಳ ವಿಜೇತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಕರಾವಳಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯ, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಆಡಳಿತ ಮತ್ತು ತಜ್ಞರನ್ನು ಒಂದೇ ವೇದಿಕೆಗೆ ತರುವ ಈ ಹಸಿರು ಸಂವಾದ ಅಭಿಯಾನವು, ಕರಾವಳಿ ಕರ್ನಾಟಕದಲ್ಲಿ ವೈಜ್ಞಾನಿಕ ಹಾಗೂ ಶಾಶ್ವತ ತ್ಯಾಜ್ಯ ನಿರ್ವಹಣೆಗೆ ಹೊಸ ಮಾದರಿಯಾಗಿ ರೂಪುಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕರ‌್ಯದರ್ಶಿ ಜಯಲಕ್ಷಿ ರಾಯ್ಕೋಡ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪರ್ಯಾವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಹೊಸದಿಂಗತ ಪತ್ರಿಕೆಯ ಸಿಇಒ ಪಿ.ಎಸ್ ಪ್ರಕಾಶ್, ಪರಿಸರ ವಿಜ್ಞಾನಿ ಡಾ. ಬಿನಿಷಾ ಪಿ., ಘನ ತ್ಯಾಜ್ಯ ನಿರ್ವಹಣಾ ತಜ್ಞ ಹಾಗೂ ಫ್ರೆಂಡ್ಸ್ ಆಫ್ ಲೇಕ್ಸ್ ಸಂಸ್ಥೆಯ ಸಂಸ್ಥಾಪಕ ರಾಮಪ್ರಸಾದ್, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅರ್ಜುನ ಕುಮಾರ್, ಹಸಿರು ಸಂವಾದ ಅಭಿಯಾನದ ಮಂಜುನಾಥ್, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಇದ್ದರು.