ನ್ಯೂಸ್

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಈ ರಾಜ್ಯದಿಂದ ಕೊಡುಗೆಯಾಗಿ ಬರಲಿದೆ 450 ಕೆಜಿ ತೂಕದ ಬೃಹತ್​ ನಗಾರಿ!

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ದೇಗಲದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಹಾಮಸ್ತಕಾಭಿಷೇಕಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಈಗಾಗಲೇ ತಮ್ಮಿಂದ ಆದ ಸಹಾಯ ಮಾಡುತ್ತಿದ್ದು, ಅನೇಕ ರೀತಿಯ ಕೊಡುಗೆಗಳನ್ನು ಅರ್ಪಿಸುತ್ತ ಬರುತ್ತಿದ್ದಾರೆ. ಈ ಪೈಕಿ ಅಹಮದಾಬಾದ್‌ನ ಒಂದು ಸಂಸ್ಥೆ, ದೇವಾಲಯಕ್ಕೆಂದು ತಯಾರಿಸಿರುವ ವಿಶೇಷ ನಗಾರಿಯೊಂದನ್ನು ಕೊಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಖಿಲ ಭಾರತ ದಗ್ಬರ್ ಸಮಾಜವು ಸಿದ್ಧಪಡಿಸಿದ ಈ ವಿಶೇಷ ನಗಾರಿ ಬರೋಬ್ಬರಿ 450 ಕೆಜಿಗಳಷ್ಟು ತೂಕವನ್ನು ಹೊಂದಿದೆ ಮತ್ತು 2024ರ ಜನವರಿ 22 ರಂದು ಮಹಾಮಸ್ತಕಾಭಿಷೇಕ ಸಮಾರಂಭಕ್ಕೂ ಮೊದಲು ಅಯೋಧ್ಯೆಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿರುವ ಸಂಸ್ಥೆ, ನಗಾರಿ ಹೊತ್ತೊಯ್ಯಲು 700 ಕೆಜಿ ತೂಕದ ಪವರ್ ಸ್ಟೀರಿಂಗ್ ರಥವನ್ನು ಸಹ ತಯಾರಿಸಿದೆ ಎಂಬುದನ್ನು ಬಹಿರಂಗಪಡಿಸಿದೆ.

ದಗ್ಬರ್ ಸಮಾಜದ ಪ್ರತಿನಿಧಿ ಅಂಬಾಲಾಲ್ ದಗ್ಬರ್ ಪ್ರಕಾರ, "ರಾಮ ಮಂದಿರಕ್ಕಾಗಿ ನಿರ್ಮಿಸಲಾಗಿರುವ ನಗಾರಿಯಲ್ಲಿ ಕಬ್ಬಿಣದ ತಟ್ಟೆಗಳನ್ನು ಬಳಸಲಾಗಿದೆ. ಆದ್ದರಿಂದ ಇದು ಸಾವಿರಾರು ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ" ಎಂದರು. ಸಂಸ್ಥೆಯ ಮತ್ತೋರ್ವ ಸದಸ್ಯ ದೀಪಕ್ ದಗ್ಬರ್ ಮಾತನಾಡಿ, "ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ನಗಾರಿಯ ಹೊರ ಭಾಗದಲ್ಲಿ ತಾಮ್ರ ಫಲಕಗಳನ್ನು ಕೆತ್ತುವ ಪ್ರಕ್ರಿಯೆ ನಡೆಯುತ್ತಿದೆ" ಎಂದು ಹೇಳಿದರು.

"ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಪದರವನ್ನು ಸಹ ಹಾಕಲಾಗುತ್ತದೆ. ಇದನ್ನು ಪೂರ್ಣಗೊಳಿಸಲು ಎರಡೂವರೆ ತಿಂಗಳು ತೆಗೆದುಕೊಂಡಿದ್ದೇವೆ" ಎಂದು ದೀಪಕ್ ಹೇಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 2024ರ ಜನವರಿ 15ರಂದು ಈ ವಿಶೇಷ ನಗಾರಿಯನ್ನು ರಾಮಮಂದಿರಕ್ಕೆ ಹಸ್ತಾಂತರಿಸಲಾಗುವುದು ಎಂದು ದಗ್ಬರ್ ಸಮಾಜದ ಪ್ರತಿನಿಧಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).