ವಾಷಿಂಗ್ಟನ್: ಶ್ರೀಮಂತ ವಲಸಿಗರು ಅಮೆರಿಕ ಪೌರತ್ವ ಪಡೆಯುವುದನ್ನು ಸುಲಭವಾಗಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೋಲ್ಡ್ ಕಾರ್ಡ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 5 ಮಿಲಿಯನ್ ಡಾಲರ್ (43.5 ಕೋಟಿ ರೂ.) ಹೂಡಿಕೆ ಮೂಲಕ ಗೋಲ್ಡ್ ಕಾರ್ಡ್ ಪಡೆಯಬಹುದು.
ಗೋಲ್ಡ್ ಕಾರ್ಡ್ ಖರೀದಿಸಿದವರಿಗೆ ಗ್ರೀನ್ ಕಾರ್ಡ್ ಸ್ಟೇಟಸ್ ನೀಡಲಾಗುವುದು, 1 ಕೋಟಿ ಗೋಲ್ಡ್ ಕಾರ್ಡ್ ನೀಡಿಕೆ ಗುರಿಯನ್ನು ಹೊಂದಲಾಗಿದೆ. ಗೋಲ್ಡ್ ಕಾರ್ಡ್ ಪ್ರಸ್ತುತ ಇರುವ ಇಬಿ-5 ವಲಸಿಗ ಹೂಡಿಕೆದಾರರ ವೀಸಾ ಯೋಜನೆಯ ಬದಲು ಜಾರಿಗೆ ಬರಲಿದೆ. ಹೊಸ ಯೋಜನೆಯಿಂದ ಅಮೆರಿಕಕ್ಕೆ ಹೆಚ್ಚಿನ ಹಣ ಹರಿದು ಬರಲಿದ್ದು, ಸಾಲ ತೀರಿಸಲು ಅನುಕೂಲವಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಗೋಲ್ಡ್ ಕಾರ್ಡ್ ಯೋಜನೆ ಅಮೆರಿಕ ಪೌರತ್ವ ಪಡೆಯುವ ಮಾರ್ಗವಾಗಲಿದೆ. ಶ್ರೀಮಂತ ವಲಸಿಗರು ನಮ್ಮ ದೇಶಕ್ಕೆ ಬಂದು ಇಲ್ಲಿ ಹೂಡಿಕೆ ಮಾಡಿ ಗೋಲ್ಡ್ ಕಾರ್ಡ್ ಖರೀದಿಸಲಿದ್ದಾರೆ. ಈ ಯೋಜನೆ ಕುರಿತು ಹೆಚ್ಚಿನ ವಿವರಗಳು ಇನ್ನು ಎರಡು ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಟ್ರಂಪ್ ಮಾಹಿತಿ ನೀಡಿದರು. ಹೂಡಿಕೆ ವೀಸಾಗಳು ವಿಶ್ವದಾದ್ಯಂತ ಸಾಮಾನ್ಯವಾಗಿದ್ದು, ಅಮೆರಿಕ, ಯುನೈಟೆಡ್ ಕಿಂಗ್ಡಮ್ ಸ್ಪೇನ್, ಗ್ರೀಸ್, ಮಾಲ್ಟಾ, ಆಸ್ಟ್ರೇಲಿಯಾ, ಕೆನಡಾ, ಇಟಲಿ ಸೇರಿ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಹೂಡಿಕೆ ವೀಸಾ ದೊರೆಯುತ್ತದೆ.
ವ್ಯತ್ಯಾಸವೇನು?: ಪ್ರಸ್ತುತ ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಜಾರಿಯಲ್ಲಿದ್ದು, ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವವರು, ಕುಟುಂಬದ ಪ್ರಾಯೋಜಕತ್ವ ಅಥವಾ ಹೂಡಿಕೆ (ಇಬಿ-5 ಯೋಜನೆ) ಮೂಲಕ ಗ್ರೀನ್ ಕಾರ್ಡ್ ಪಡೆಯಬಹುದು. ಗೋಲ್ಡ್ ಕಾರ್ಡ್ ಸಹ ಗ್ರೀನ್ ಕಾರ್ಡ್ ನಂತೆಯೇ ಇದೆ. ಆದರೆ ಗೋಲ್ಡ್ ಕಾರ್ಡ್ ಪಡೆಯಲು ಹಣ ನೀಡಬೇಕು. ಈ ಯೋಜನೆಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ.
ಇಬಿ-5 ಬದಲಾವಣೆ ಏಕೆ?: 1992ರಲ್ಲಿ ಅಮೆರಿಕ ಸರ್ಕಾರ 1.05 ಮಿಲಿಯನ್ ಡಾಲರ್ (8.7 ಕೋಟಿ ರೂ.) ಹೂಡಿಕೆ ಮಾಡಿ ಗ್ರೀನ್ ಕಾರ್ಡ್ ಪಡೆಯುವ ಯೋಜನೆ ಜಾರಿಗೆ ತಂದಿತ್ತು. ಇದು ಜನಪ್ರಿಯ ಯೋಜನೆಯಾಗಿದ್ದು, 2022ರಲ್ಲಿ ಒಂದು ವರ್ಷದಲ್ಲಿ 8 ಸಾವಿರ ಜನರು ಹೂಡಿಕೆದಾರ ವೀಸಾವನ್ನು ಪಡೆದಿದ್ದರು. ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಈ ಯೋಜನೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದರು. ಹೂಡಿಕೆ ಮೊತ್ತವನ್ನು 1.05 ಮಿಲಿಯನ್ ಡಾಲರ್ನಿಂದ 1.8 ಮಿಲಿಯನ್ ಡಾಲರ್ಗೆ ಏರಿಕೆ ಮಾಡಿದ್ದರು. ಆದರೆ 2021 ರಲ್ಲಿ ನ್ಯಾಯಾಲಯ ಟ್ರಂಪ್ ಆದೇಶಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.