ರಾಷ್ಟ್ರೀಯ ಸಬ್ ಜೂನಿಯರ್ ಈಜು: ಕರ್ನಾಟಕಕ್ಕೆ ಮತ್ತೆರಡು ಚಿನ್ನದ ಪದಕ
ಬೆಂಗಳೂರು: ಕರ್ನಾಟಕ ತಂಡ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 42ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ (
) 3ನೇ ದಿನವಾದ ಶನಿವಾರ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಆರು ಕಂಚಿನ ಸಹಿತ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ. ಕರ್ನಾಟಕ ಕೂಟದ ಮೊದಲೆರಡು ದಿನಗಳಲ್ಲಿ 6 ಚಿನ್ನ, 6 ಬೆಳ್ಳಿ, 10 ಕಂಚಿನ ಸಹಿತ 22 ಪದಕಗಳನ್ನು ಜಯಿಸಿತ್ತು.
ಕರ್ನಾಟಕ ತಂಡ ಬಾಲಕರ 4/100 ಮೀ. ಮೆಡ್ಲೆ ರಿಲೇ ಮತ್ತು ಬಾಲಕಿಯರ 4/100 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕಗಳನ್ನು ಒಲಿಸಿಕೊಂಡಿತು. ಬಾಲಕರ 200 ಮೀ. ಬ್ರೆಸ್ಟ್ಸ್ಟ್ರೊಕ್ ವಿಭಾಗದಲ್ಲಿ ರಾಜ್ಯದ ಅರ್ಜುನ್ ರಾವನ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಉಳಿದಂತೆ ಬಾಲಕರ 400 ಮೀ. ಫ್ರೀಸ್ಟೈಲ್ನಲ್ಲಿ ಶ್ರೇಯಸ್ ಸುನೀಲ್ (ಗ್ರೂಪ್2), ವಿವಾನ್ ಕ್ರಿಷ್ಣ ಟಿ.ಎಸ್. (ಗ್ರೂಪ್3), ಬಾಲಕಿಯರ 400 ಮೀ. ಫ್ರೀಸ್ಟೈಲ್ನಲ್ಲಿ ಇದಿಕಾ ಭಟ್ (ಗ್ರೂಪ್2), ಗಾಯತ್ರಿ ಸೋಮಯಾಜಿ (ಗ್ರೂಪ್3), ಬಾಲಕಿಯರ 200 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ ಸಿರಿ ಪ್ರೀತಮ್ (ಗ್ರೂಪ್2), 100 ಮೀ. ಬಟರ್ಫ್ಲೈನಲ್ಲಿ ಪಣಿಷ್ಕಾ ಕೆ. (ಗ್ರೂಪ್3) ಕಂಚಿನ ಪದಕ ಒಲಿಸಿಕೊಂಡರು. ಭಾನುವಾರ ಕೊನೇ ದಿನದ ಸ್ಪರ್ಧೆಗಳು ನಡೆಯಲಿವೆ.