| ಅವಿನಾಶ ಮೂಡಂಬಿಕಾನ ಬೆಂಗಳೂರು
ಹಣ ದ್ವಿಗುಣ, ಹೆಚ್ಚಿನ ಬಡ್ಡಿ, ಕಮಿಷನ್ ಆಮಿಷ, ನಿವೇಶನ-ಚಿನ್ನದ ಮೇಲೆ ಹೂಡಿಕೆ ಆಸೆ ತೋರಿಸಿ ಜನರಿಗೆ ವಂಚಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕ ಕಂಪನಿಗಳ ಧೋಖಾ ಬಹಿರಂಗವಾಗಿದ್ದರೂ ಜನರು ಜಾಗೃತರಾಗದಿರುವುದು ಪೊಲೀಸರಿಗೂ ತಲೆನೋವಾಗಿದೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 4,357 ವಂಚನೆ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಶೇ.50 ವಂಚನೆ ಪ್ರಕರಣಗಳು ಮಾತ್ರವೇ ಠಾಣೆಗೆ ಬರುತ್ತವೆ. ಆರೋಪಿಗಳಿಂದ ಬೆದರಿಕೆ, ಪದೇಪದೆ ವಿಚಾರಣೆ, ಪೊಲೀಸ್ ಠಾಣೆಗೆ ಅಲೆಯುವುದು, ಕೋರ್ಟ್ಗೆ ಹಾಜರಾಗುವುದು ಮತ್ತು ಹೇಗೆ ದೂರು ಕೊಡಬೇಕೆಂಬ ಮಾಹಿತಿ ಕೊರತೆಯಿಂದಾಗಿ ಉಳಿದ ಶೇ.50 ಕೇಸ್ಗಳು ಬೆಳಕಿಗೆ ಬರುವುದೇ ಇಲ್ಲ.
ರಾಜ್ಯದಲ್ಲಿ 8 ಸಾವಿರಕ್ಕೂ ಅಧಿಕ ವಂಚನೆ ಕೇಸ್ಗಳು ಇನ್ನೂ ತನಿಖಾ ಹಂತದಲ್ಲಿವೆ. 2020ರಲ್ಲಿ ಲಾಕ್ಡೌನ್ ಇದ್ದರೂ 4,699 ವಂಚನೆ ಪ್ರಕರಣ ದಾಖಲಾದರೆ, ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 4,08,915 ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಪೋಂಝಿ ಸ್ಕೀಂನ ಚೀಟಿಂಗ್ ಕೇಸ್ಗಳೇ ಅಧಿಕವಾಗಿವೆ. ವಂಚನೆ ಪ್ರಕರಣಗಳಿಂದ ವಾರ್ಷಿಕವಾಗಿ ಕರ್ನಾಟಕದಲ್ಲೇ ನೂರಾರು ಕೋಟಿ ರೂ. ಮೋಸ ಆಗುತ್ತಿದೆ.
ಬಹುಕೋಟಿ ವಂಚನೆಯ 45 ಕೇಸ್: 15 ವರ್ಷದಲ್ಲಿ 45ಕ್ಕೂ ಅಧಿಕ ಬೃಹತ್ ಪ್ರಮಾಣದ ಬಹುಕೋಟಿ ವಂಚನೆ ಸ್ಕೀಂಗಳು ಬೆಳಕಿಗೆ ಬಂದಿವೆ. ಬೇಗ ಶ್ರೀಮಂತರಾಗುವ ಕನಸುಕಂಡು ಇಂತಹ ಸ್ಕೀಂಗಳಲ್ಲಿ ಹಣ ಹೂಡಿಕೆ ಮಾಡಿದ ಲಕ್ಷಾಂತರ ಜನ ನಷ್ಟಕಂಡಿದ್ದಾರೆ. ಕಳೆದ ಜೂನ್ನಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ 268 ವಂಚನೆ ಕೇಸ್, ಅಕ್ಟೋಬರ್ನಲ್ಲಿ 459ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ 265, ಆಗಸ್ಟ್ನಲ್ಲಿ 288, ಸೆಪ್ಟೆಂಬರ್ನಲ್ಲಿ 379 ಕೇಸ್ಗೆ ಸಂಬಂಧಿಸಿದಂತೆ ದೂರು ದಾಖಲಾಗಿವೆ.
ಜಾಮೀನು ಸುಲಭ: ಎಷ್ಟೇ ಕೋಟಿ ರೂ. ವಂಚನೆ ಮಾಡಿದರೂ ಐಪಿಸಿ ಸೆಕ್ಷನ್ 420 ಪ್ರಕಾರ ಪ್ರಕರಣ ದಾಖಲಾಗುತ್ತದೆ. ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದರೂ ನ್ಯಾಯಾಲಯಗಳಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ಅದೇ ವಂಚನೆ ಪ್ರಕ್ರಿಯೆ ಮುಂದುವರಿಯುತ್ತಾರೆ. ಆದ್ದರಿಂದ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ: ವಂಚನೆ ಆರೋಪ ಸಾಬೀತಾದರೆ 7 ವರ್ಷ ಜೈಲು ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಬಹುತೇಕ ಪ್ರಕರಣಗಳು ತನಿಖಾ ಹಂತದಲ್ಲೇ ಇವೆ. ಸಾಕ್ಷ್ಯಾಧಾರ ಕೊರತೆ, ವಿಚಾರಣೆ ಸಂದರ್ಭದಲ್ಲಿ ದೂರುದಾರರೇ ಪ್ರತಿಕೂಲ ಸಾಕ್ಷ್ಯ ನುಡಿಯುವುದು, ದೂರು ವಾಪಸ್ ಪಡೆಯುವುದು ಸೇರಿ ಹಲವು ಕಾರಣಗಳಿಂದಾಗಿ ಬಹುತೇಕ ಕೇಸ್ಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ.
ಇಎಂಐ ಸಂದೇಶ ನೋಡಿ ಶಾಕ್!: ಪ್ರತಿ ತಿಂಗಳು ಖಾತೆಗೆ ಹಣ ಬರುತ್ತೆ ಎಂದು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ವಂಚಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಟೇಲರ್ ಆಗಿರುವ ವಿದ್ಯಾರಣ್ಯಪುರದ ನಯಿಮ್ ತಾಜ್ ಎಂಬ ಮಹಿಳೆಗೆ ಪರಿಚಯವಾಗಿದ್ದ ಗುಲ್ಜರ್ ಭಾನು, ಸ್ಕೀಂವೊಂದರ ಪಾಲುದಾರರಾದರೆ ಪ್ರತಿ ತಿಂಗಳು ಹಣ ಪಡೆಯಬಹುದು ಎಂದು ನಂಬಿಸಿದ್ದಳು. ನಯೀಮ್ ತನ್ನ ಆಧಾರ್, ಪಾನ್ಕಾರ್ಡ್ ಕೊಟ್ಟು, ಪರಿಚಿತ 24 ಜನರನ್ನು ಆರೋಪಿಗಳಿಗೆ ಪರಿಚಯಿಸಿ ಗ್ರಾಹಕರನ್ನಾಗಿ ಮಾಡಿದ್ದಳು. ಕೆಲ ದಿನಗಳ ಬಳಿಕ ಈ ಸ್ಕೀಂಗೆ ಸೇರಿದವರಿಗೆ ವಿವಿಧ ಬ್ಯಾಂಕ್ಗಳಿಂದ ಇಎಂಐ ಪಾವತಿಸುವಂತೆ ಕರೆ ಬರಲಾರಂಭಿಸಿವೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಇವರಿಂದ ಪಡೆದ ಆಧಾರ್, ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಇವರ ಹೆಸರಿನಲ್ಲೇ ಬ್ಯಾಂಕ್ನಿಂದ ಸಾಲ ಪಡೆದು ಮೊಬೈಲ್, ಬೈಕ್ ಖರೀದಿಸಿರುವುದು ಗೊತ್ತಾಗಿದೆ.