ನವದೆಹಲಿ: ಜನತಾ ದಳ್ (ಸಂಯುಕ್ತ)ನ ಮುಖಂಡ ಅಜಯ್ ಅಲೋಕ್ ಎಂಬುವರು ಮಾಡಿದ್ದ ಟ್ವೀಟ್ವೊಂದು ವೈರಲ್ ಆಗಿತ್ತು. ದೆಹಲಿಯಲ್ಲಿ ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದ ಟ್ವೀಟ್ ಇದಾಗಿತ್ತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 62 ಕ್ಷೇತ್ರಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಶಾಸಕರಲ್ಲಿ 40 ಶಾಸಕರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಎಂದು ಅಜಯ್ ಅಲೋಕ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.
ಆಪ್ನ 60 ಶಾಸಕರಲ್ಲಿ 40 ಮಂದಿ ಅತ್ಯಾಚಾರ ಆರೋಪಿಗಳಾಗಿದ್ದಾರೆ. ಅಂಥವರ ಬೆಂಬಲದಿಂದ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾರೆ. ಸತ್ಯವಾಗಿಯೂ ಈಗ ಹೊಸ ರಾಜಕಾರಣ ಶುರುವಾಗಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಆದರೆ ನಿಜಕ್ಕೂ ಆಪ್ನ 40 ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ಇದೆಯಾ? ಅವರು ಆರೋಪಿಗಳಾ? ಅಜಯ್ ಅಲೋಕ್ ಟ್ವೀಟ್ನಲ್ಲಿ ಇರುವ ವಿಚಾರ ಸತ್ಯವಾ ಎಂಬ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ನಡೆಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್(ಎಡಿಆರ್) (ಚುನಾವಣಾ ಮತ್ತು ರಾಜಕೀಯ ಕ್ಷೇತ್ರದ ಸುಧಾರಣೆಗಾಗಿ ಪಕ್ಷೇತರ ಮತ್ತು ಸರ್ಕಾರೇತರವಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸಂಸ್ಥೆ.)ನ ವರದಿಯನ್ನು ಬೂಮ್ ಪರಿಶೀಲನೆ ಮಾಡಿದಾಗ, ಅಜಯ್ ಅಲೋಕ್ ಅವರ ಆರೋಪ ಸುಳ್ಳು ಎಂಬುದು ಬೆಳಕಿಗೆ ಬಂದಿದೆ.
40 ಶಾಸಕರು ಅತ್ಯಾಚಾರ ಆರೋಪಿಗಳಲ್ಲ. ಬದಲಿಗೆ ಆಪ್ನ ಮಹೀಂದರ್ ಗೋಯಲ್ ಎಂಬುವರ ವಿರುದ್ಧ ಅತ್ಯಾಚಾರ ಪ್ರಕರಣ ಇದೆ. ಇವರು ತಿಥಾಲಾ ವಿಧಾನಸಭಾ ಕ್ಷೇತ್ರದವರು ಎಂಬುದು ಎಡಿಆರ್ನ ವರದಿಯಿಂದ ಗೊತ್ತಾಗಿದೆ.
ಅದು ಬಿಟ್ಟರೆ ಆಪ್ನ ಆರು ಮಂದಿ ಶಾಸಕರು, ಬಿಜೆಪಿಯ ಓರ್ವ ಶಾಸಕನ ವಿರುದ್ಧ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕೇಸ್ ರಿಜಿಸ್ಟರ್ ಆಗಿದೆ.
ಈಗ ಗೆದ್ದಿರುವ ಒಟ್ಟು 70 ಶಾಸಕರಲ್ಲಿ (ಆಪ್-62 ಮತ್ತು ಬಿಜೆಪಿ-8) ಒಟ್ಟು 37 ಮಂದಿ (ಆಪ್ನ 62 ಮತ್ತು ಬಿಜೆಪಿ-4) ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಇದೆ. ಅವರೆಲ್ಲ ಚುನಾವಣಾ ಪೂರ್ವ ಅಫಿಡಿವಿಟ್ನಲ್ಲಿಯೇ ಅದನ್ನು ಘೋಷಿಸಿರುವ ಬಗ್ಗೆ ಎಡಿಆರ್ನಲ್ಲಿ ಉಲ್ಲೇಖವಾಗಿದೆ. ಆದರೆ ಅಜಯ್ ಅಲೋಕ್ ಹೇಳಿದಂತೆ ಆಪ್ನ 40 ಶಾಸಕರು ಅತ್ಯಾಚಾರ ಆರೋಪಿಗಳಲ್ಲ. ಓರ್ವ ಶಾಸಕ ಮಾತ್ರ ರೇಪ್ ಕೇಸ್ನಲ್ಲಿ ಆರೋಪಿ ಎಂಬುದು ಗೊತ್ತಾಗಿದೆ.